ಧರ್ಮಸ್ಥಳ: ಅಕ್ಟೋಬರ್ 25 ರಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಾರಿ 27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಹಾಗಾಗಿ ಅ.25ರಂದು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಗಳನ್ನು ಬಂದ್ ಮಾಡಲಾಗಿದ್ದು, ಭಕ್ತರಿಗೆ ದರ್ಶನಾವಕಾಶ ಇರುವುದಿಲ್ಲ.
ಈ ಹಿನ್ನಲೆಯಲ್ಲಿಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ 25ರ ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನಪ್ರಸಾದವು ಮಧ್ಯಾಹ್ನ 2.30 ಕ್ಕೆ ಕೊನೆಗೊಂಡು ರಾತ್ರಿ 7.30 ರ ಬಳಿಕವೆ ನಡೆಯಲಿದೆ. ಅಕ್ಟೋಬರ್ 25 ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅಕ್ಟೋಬರ್ 26 ರಿಂದ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.
ಇನ್ನೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಕ್ಟೋಬರ್ 25ರಂದು ಸೂರ್ಯಗ್ರಹಣ ಇರುವುದರಿಂದ ಆ ದಿನ ಯಾವುದೇ ಸೇವೆಗಳು, ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಲಾಗಿದ್ದು, 26ರ ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ.
ಉಡುಪಿ ಶ್ರೀಕೃಷ್ಣಮಠದಲ್ಲಿ 25ರಂದು ಸೇವೆ ಹಾಗೂ ಭೋಜನ ವ್ಯವಸ್ಥೆ ಇರುವುದಿಲ್ಲ. ಭಕ್ತರು ದೇವರ ದರ್ಶನ ಮಾಡಲು ಯಾವುದೇ ನಿರ್ಬಂಧವಿಲ್ಲ.