ಸ್ವಚ್ಚ ಕಾರ್ಕಳ ಬ್ರಿಗೇಡ್ ತಂಡವು ಕಾರ್ಕಳದಲ್ಲಿ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು, ಕಾರ್ಕಳ ತಾಲ್ಲೂಕನ್ನು ಕಸಮುಕ್ತಗೊಳಿಸುವಲ್ಲಿ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿಯವರ ಧ್ಯೇಯವಾಕ್ಯ ‘ಸ್ವಚ್ಛತೆಯೇ ಸೇವೆ’ ಎಂಬ ಪರಿಕಲ್ಪನೆಯಲ್ಲಿ ಯುವ ಬ್ರಿಗೇಡ್ ಮತ್ತು ರಾಮಕೃಷ್ಣ ಮಿಷನ್, ಮಂಗಳೂರು ಇವರುಗಳ ಸ್ವಚ್ಛ ಕಾರ್ಯದಿಂದ ಸ್ಪೂರ್ತಿ ಪಡೆದು ಕಾರ್ಕಳವನ್ನು ಸ್ವಚ್ಛ ಹಾಗೂ ಕಸಮುಕ್ತ ಮಾಡುವ ಉದ್ದೇಶದಿಂದ ವರ್ಷದಲ್ಲಿ 100 ಗಂಟೆಯ ಸಮಯವನ್ನು ಮೀಸಲಿಡುವ ಪ್ರತಿಜ್ಞೆಯೊಂದಿಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ಅಸ್ತಿತ್ವಕ್ಕೆ ಬಂದಿದೆ.
ಈ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 6.30 ರಿಂದ 8.30 ರವರೆಗೆ ಕಾರ್ಕಳದಾದ್ಯಂತ ಸಾರ್ವಜನಿಕ ರಸ್ತೆಗಳು, ಹೆದ್ದಾರಿಗಳು, ಪ್ರವಾಸಿ ತಾಣಗಳು, ಪರ್ವತಗಳು, ಕಾಡುಗಳು, ನದಿ ದಡಗಳು, ಐತಿಹಾಸಿಕ ಸ್ಥಳಗಳು ಮುಂತಾದ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಆಯೋಜಿಸುತ್ತಿದೆ.
ಇದೀಗ ಈ ತಂಡದ ಕಾರ್ಯಕ್ರಮಗಳಿಗೆ ಶತದಿನೋತ್ಸವದ ಸಂಭ್ರಮ. ಈ 100ನೇ ಸ್ವಚ್ಛತಾ ಅಭಿಯಾನವನ್ನು ಇನ್ನೂ ಹೆಚ್ಚು ಜನರಿಗೆ ಸ್ವಚ್ಛತಾ ಭಾವನೆಯನ್ನು ಪಸರಿಸಬೇಕೆಂಬ ದೃಷ್ಠಿಯಿಂದ ಸ್ವಚ್ಚ ಕಾರ್ಕಳ ತಂಡವು ಫೆಬ್ರವರಿ 27 ನೇ ಭಾನುವಾರ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಏಕಕಾಲಕ್ಕೆ 100 ಕ್ಕೂ ಹೆಚ್ಚಿನ ತಂಡಗಳ ಸಹಕಾರದೊಂದಿಗೆ 100 ಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ನಡೆಸಲಾಯಿತು. ಅಲ್ಲದೇ, ಸ್ವಚ್ಛ ಕಾರ್ಕಳ ಬ್ರಿಗೇಡ್ ಮೊದಲ ಸ್ವಚ್ಛತಾ ಅಭಿಯಾನ ನಡೆಸಿದ ಸ್ಥಳವಾದ ಕಾರ್ಕಳದ ರಾಮಸಮುದ್ರದ ಬಳಿ ಫೆಬ್ರವರಿ 27ರ ಸಂಜೆ ಪ್ರಕೃತಿಯ ನಡುವಳಿ “ಸ್ವಚ್ಚ ಸಂಗಮ” ಕಾರ್ಯಕ್ರಮ ನಡೆಸಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಏಕಾಗಮ್ಯಾನಂದ ಜಿ ಅವರು ಸ್ವಚ್ಚ ಕಾರ್ಕಳ ಬ್ರಿಗೇಡ್ ನ ಸದಸ್ಯರಿಗೆ ಮುಂದಿನ ಯೋಜನೆಗಳಿಗೆ ಮಾರ್ಗದರ್ಶನ ನುಡಿ ನೀಡಿದರು. ಆಡಳಿತ ವರ್ಗ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಒಟ್ಟಾಗಿ ಕಾರ್ಕಳದ ಕಸ ನಿರ್ವಣೆಗೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು. ಕಾರ್ಕಳದ ವಿಧಾಯಕ ಮತ್ತು ವಿದ್ಯುತ್ & ಸಂಸ್ಕೃತಿ ಸಚಿವ ಹಾಗು ಸ್ವಚ್ಚ ಕಾರ್ಕಳ ಬ್ರಿಗೇಡ್ ನ ಶ್ರೀ ವಿ ಸುನಿಲ್ ಕುಮಾರ್ ಅವರು ಸ್ವಚ್ಚ ಕಾರ್ಕಳ ಬ್ರಿಗೇಡ್ ಮಾಡಿರುವ ಸೇವೆಯಿಂದ ಅನೇಕ ತಂಡಗಳು ಪ್ರೇರಣೆಗೊಂಡಿವೆ ಎಂದು ಶ್ಲಾಘಿಸಿದರು.
ಉಡುಪಿ ಜಿಲ್ಲೆಯ ಸ್ವಚ್ಚ ಭಾರತ ಮಿಷನ್ ಇದರ ನೋಡಲ್ ಅಧಿಕಾರಿ ಶ್ರೀ ಶ್ರೀನಿವಾಸ ರಾವ್ ಅವರು ಮನೆಯಲ್ಲಿ ಕಸ ವಿಲೇವಾರಿಯ ಮಾಡುವ ವಿವಿದ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಶತದಿನೋತ್ಸವದ ಆಚರಣೆಗಳ ಭಾಗವಾಗಿ ತಂಡವು ಸ್ವಾಚ್-ಭಾರತ್ ಮಿಷನ್ನ ಬಗ್ಗೆ ಅರಿವು ಮೂಡಿಸಲು ಸಲುವಾಗಿ #ಸ್ವಚ್ಛ ಮೇವ ಜಯತೆ ಎಂಬ ಕಿರು ಚಲನಚಿತ್ರ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ 10,000 ದ ಪ್ರಥಮ ಬಹುಮಾನವನ್ನು ಸೂರ್ಯ ಚಂದ್ರ ಕ್ರಿಯೇಷನ್ಸ್ ತಂಡ ಮತ್ತು 5,000ದ ದ್ವಿತೀಯ ಬಹುಮಾನವನ್ನು 100 ಕ್ಕಿಂತಲೂ ಹೆಚ್ಚು ಶಾಲಾ ಮಕ್ಕಳನ್ನು ಒಳಗೊಂಡಿರುವ ಗುರುಕುಲಾ ಹಿರಿಯ ಪ್ರಾಥಮಿಕ ಶಾಲೆ ಮಾಳ ಗೆದ್ದುಕೊಂಡಿತು.
ಈ ಕಾರ್ಯಕ್ರಮದಲ್ಲಿ ದೇಶದ ತ್ಯಾಜ್ಯ ನಿರ್ವಹಣೆಯಲ್ಲಿ ಬೆನ್ನೆಲುಬಾಗಿರುವ ಘನ ದ್ರವ ಸಂಪನ್ಮೂಲ ನಿರ್ವಹಣೆ (ಎಸ್ಎಲ್ಆರ್ಎಮ್) ಉದ್ಯೋಗಿಗಳು ಮತ್ತು ಪೌರಾಕಾರ್ಮಿಕರನ್ನು ಗೌರವಿಸಲಾಯಿತು.
ಸಪ್ತಾಯಿಕ ಸ್ವಚ್ಛತೆಯ ಜೊತೆ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವು ಹಲವಾರು ಯೋಜನೆಗಳ್ನು ಕೈ ಗೊಂಡಿದೆ. ಸ್ವಚ್ಚ ಕಾರ್ಕಳವನ್ನಾಗಿ ಮಾಡುವಲ್ಲಿ ಈ ತಂಡ ಸಂಪೂರ್ಣ ಭರವಸೆಯನ್ನು ಹುಟ್ಟುಹಾಕಿದೆ. ಈಗಾಗಲೇ ಸ್ವಚ್ಚ ಕಾರ್ಕಳ ತಂಡ 100 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅಲ್ಲದೇ, ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.