ಉಡುಪಿ ಜಿಲ್ಲೆಯಲ್ಲಿ ಸೃಷ್ಠಿಯಾಗಿದ್ದ ಹಿಜಾಬ್ ವಿವಾದ ರಾಜ್ಯದ ನಾನಾ ಕಡೆಗಳಲ್ಲಿ ಹಬ್ಬಿಕೊಂಡಿತ್ತು. ಈ ವಿವಾದಕ್ಕೆ ಸರ್ಕಾರ ಕಡಿವಾಣ ಹಾಕಲು ಇಂದು ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ನೂತನ ಸುತ್ತೋಲೆಯೊಂದನ್ನು ಹೊರಡಿಸಿದೆ.
ಪದವಿ ಪೂರ್ವ ಕಾಲೇಜುಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್ ಅವರು ಇಂದು(ಶನಿವಾರ) ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಎಲ್ಲ ಶಾಲಾ ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯವಾಗಿದ್ದು, ಖಾಸಗಿ ಶಾಲೆಗಳು, ಕಾಲೇಜುಗಳಿಗೂ ತಮ್ಮ ಆಡಳಿತ ಮಂಡಳಿ ನಿರ್ಧರಿಸಿರುವಂತಹ ಸಮವಸ್ತ್ರವನ್ನೇ ಧರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅನ್ವಯ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಪದವಿ ಪೂರ್ವ ಕಾಲೇಜುಗಳಿಗೂ ಸಮವಸ್ತ್ರ ಕಡ್ಡಾಯ. ಕಾಲೇಜುಗಳಲ್ಲಿ CDC ಅಥವಾ ಆಡಳಿತ ಮಂಡಳಿ ಸಮಸವ್ತ್ರ ನಿಗಧಿ ಪಡಿಸದಿದ್ದಲ್ಲಿ, ಸಮಾನತೆ ಹಾಗೂ ಐಕೆತೆ ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪು ಧರಿಸಿಕೊಳ್ಳತಕ್ಕದೆಂದು ಆದೇಶಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಹಿಂದೂ ಯುವಕ, ಯುವತಿಯರು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬಂದಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತಲ್ಲದೇ, ಕೋಮು ಸಾಮರಸ್ಯದ ಭಾವನೆಗೂ ಧಕ್ಕೆ ತರುವ ಮೂಲಕ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.
ಇನ್ನು, ಹಿಜಾಬ್ ನನ್ನ ಹಕ್ಕು. ಸಂವಿಧಾನದ ಅನುಸಾರ ನನ್ನ ಧರ್ಮ ಪಾಲನೆಗೆ ಅವಕಾಶ ನೀಡಬೇಕು ಎಂದು ಉಡುಪಿಯ ವಿದ್ಯಾರ್ಥಿನಿಯೋರ್ವಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಳೆ. ಹೈಕೋರ್ಟ್ನಲ್ಲಿ ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.