ರಾಜ್ಯದ ಹಿಜಾಬ್ ವಿವಾದ ಕೋರ್ಟ್ನ ಅಂಗಳದಲ್ಲಿದೆ. ಈಗಾಗಲೇ ಕೋರ್ಟ್ ಮಧ್ಯಂತರ ಆದೇಶ ನೀಡಿ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ. ಇದೀಗ, ಶಿವಮೊಗ್ಗದಲ್ಲಿ ಹಿಜಾಬ್ ಸಂಬಂಧಿತವಾಗಿ ನಡೆದ ಘಟನೆಗಳಿಗೆ ಸಂಬಂಧಿಸಿ ಒಟ್ಟಾರೆ 40 ಕ್ಕೂ ಹೆಚು ಪ್ರಕರಣಗಳು ದಾಖಲಾಗಿವೆ.
ಹಿಜಾಬ್-ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿ ಹರಿಹರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಗಲಾಟೆ, ಮಲೆಬೆನ್ನೂರಿನ ಯುವಕನಿಗೆ ಇರಿದ ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿವೆ.
ಶಿವಮೊಗ್ಗ ಮತ್ತು ಸಾಗರ ಪಟ್ಟಣದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಒಟ್ಟು 9 ಎಫ್ಐಆರ್ ದಾಖಲು ಮಾಡಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ 6 ವಿದ್ಯಾರ್ಥಿಗಳನ್ನು ಪೋಲಿಸ್ ಬಂಧಿಸಿದ್ದಾರೆ. ಪೋಲಿಸ್ ವಾಹನ ಜಖಂ ಗೊಳಿಸಿದ ಪ್ರಕರಣದಲ್ಲಿ ಹೊರಗಿನ ಮೂವರನ್ನು ಬಂಧಿಸಲಾಗಿದೆ. ಒಟ್ಟು 9 ಆರೋಪಿತರ ಬಂಧನವಾಗಿದೆ.
ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಕಾಲೇಜಿನಲ್ಲಿ ಅಹಿತಕರ ಘಟನೆ ಸಂಬಂಧಿಸಿದಂತೆ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿದೆ. ಸಾಗರದಲ್ಲಿ ನಡೆದ ಘಟನೆ ಸಂಬಂಧ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿದೆ. ಘಟನೆಯ ವಿಡಿಯೋ ಮತ್ತು ಪೋಟೋಗ್ರಫಿ ಆದಾರದ ಮೇಲೆ ನೈಜ ಆರೋಪಿಗಳ ಬಂಧನವಾಗಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ವಿವಾದಿತ ಹಿಜಾಬ್-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವವರೆಗೂ ಹಿಜಾಬ್-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ-ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್ನ ವಿಸ್ತೃತ ಪೀಠ ಗುರುವಾರ ವಿಚಾರಣೆ ವೇಳೆ ತಿಳಿಸಿದೆ.