ಕುಂದಾಪುರ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.
ಎಂದಿನಂತೆಯೆ 26 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ಗೇಟಿನ ಬಳಿಯೇ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಹಿಜಾಬ್ ಇಲ್ಲದೆ ಬಂದರೆ ಮಾತ್ರ ಕಾಲೇಜಿಗೆ ಪ್ರವೇಶ ನೀಡುವುದಾಗಿ ಅವರು ಹೇಳಿದ್ದಾರೆ.
ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದು ಕಾಲೇಜಿನ ಒಳಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಾಂಶುಪಾಲರು ಅನುಮತಿ ನೀಡಿಲ್ಲ.
ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರದ ನಿರ್ದೇಶನವಿದ್ದು ಪಾಲಿಸಿದರೆ ಮಾತ್ರ ಕಾಲೇಜಿಗೆ ಪ್ರವೇಶ ನೀಡಲಾಗುವುದು. ಬುಧವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಮಾತ್ರ ಹಾಕಿಕೊಂಡು ಕಾಲೇಜಿಗೆ ಬರಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ನಿರ್ಣಯವನ್ನು ಪಾಲಿಸಲೇಬೇಕು ಎಂದು ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ ತಿಳಿಸಿದ್ದಾರೆ.
ಉಡುಪಿಯ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಹಿಜಾಬ್ ವಿವಾದ ನಡೆಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ಬಗ್ಗೆ ವಿವಾದ ಭುಗಿಲೆದ್ದಿತ್ತು. ಇದೀಗ, ಕುಂದಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಕಾಲೇಜಿನ ಒಳಗಡೆ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಹಿಂದೂ ಪರ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಅಲ್ಲದೇ, ಹಿಜಾಬ್ಗೆ ಅವಕಾಶ ಕೊಟ್ಟರೆ ತಾವು ಕೇಸರಿ ವಸ್ತ್ರ ಧರಿಸಿ ಕಾಲೇಜಿಗೆ ಬರುವುದಾಗಿ ಹೇಳಿದ್ದರು. ಕಾಲೇಜು ಆಡಳಿತ ಮಂಡಳಿ ಹಾಗೂ ಸ್ಥಳಿಯ ಶಾಸಕರು ಪೋಷಕರ ಸಭೆ ನಡೆಸಿದರೂ ಈ ಸಮಸ್ಯೆ ಪರಿಹಾರವಾಗಿಲ್ಲ.
ಹಿಜಾಬ್ ಧರಿಸುವ ಮೂಲಕ ಧರ್ಮ ಪಾಲನೆ ಮಾಡುವುದು ನನ್ನ ಹಕ್ಕು. ನನ್ನ ಧರ್ಮದ ಆಚರಣೆಗೆ ಅವಕಾಶ ಮಾಡಿಕೊಂಡುವಂತೆ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಇನ್ನು, ಕಾಲೇಜಿನಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಸಮಿತಿಯ ವರದಿ ಬಂದ ನಂತರ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಉಡುಪಿ ಉಸ್ತುವಾರಿ ಸಚಿವ ಎಸ್.ಎಂಗಾರ ಹೇಳಿದ್ದಾರೆ.