ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶವ ಪಾಲನೆ ಮಾಡುವುದು ದೇಶದ ಎಲ್ಲಾ ನಾಗರೀಕರ ಕರ್ತವ್ಯ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲೇಬೇಕು. ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೋರ್ಟ್ ನಿಮಯ ಉಲ್ಲಂಘಿಸಿದರೆ ಕ್ರಮಕೈಗೊಳ್ಳುತ್ತೇವೆ. ಹಿಜಾಬ್ ಧರಿಸಿ ಬರುತ್ತೇವೆಂದು ಪಟ್ಟು ಹಿಡಿಯುವಂತಿಲ್ಲ ಪಟ್ಟು ಹಿಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೋರ್ಟ್ ಆದೇಶಕ್ಕೆ ಮಾನ್ಯತೆ ಕೊಡದಿದ್ದರೆ ಈ ದೇಶದ ಪ್ರಜೆಗಳೆಲ್ಲ ಎನ್ನುವುದು ಅರ್ಥವಾಗುತ್ತದೆ. ಕಾನೂನಿಗಿಂತ ಇಲ್ಲಿ ಯಾರೂ ದೊಡ್ಡವರಲ್ಲ. ಶಿಕ್ಷಣ ಬೇಕೆಂದರೆ ಶಿಕ್ಷಣ ಸಂಸ್ಥೆಗಳು ಮಾಡಿರುವ ಕಾನೂನನ್ನು ಪಾಲಿಸಿ ಬರಬೇಕು. ಎಲ್ಲರೂ ಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು.
ಪ್ರತಿಭಟನೆ ಮಾಡುವರು ಮಾಡಲಿ. ಆದರೆ, ಅವರು ಶಾಲೆ ಒಳಗಡೆ ಬರುವುದಕ್ಕೆ ಅವಕಾಶವಿಲ್ಲ. ಕೋರ್ಟ್ ಆದೇಶ ಪಾಲನೆ ಮಾಡದವರ ವಿರುದ್ಧ ಕ್ರಮ ಆಗಬೇಕು. ಕೆಲವು ಕಾಲೇಜುಗಳಲ್ಲಿ ನಿಯಮ ಉಲ್ಲಂಘನೆ ವಿಚಾರ ಗಮನಕ್ಕೆ ಬಂದಿದೆ. ಯಾರು ಕೂಡ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಕೋರ್ಟ್ ಆದೇಶದಂತೆ ಶಾಲೆಗಳ ನಡೆಯುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಶಾಂತಿಯುತ ವಾತಾವರಣ ನಿರ್ಮಿಸಲು ಎಲ್ಲರೂ ಸಹಕರಿಸಬೇಕು. ಶಿವಮೊಗ್ಗದಲ್ಲೂ ಕೂಡ ಯಾವುದೇ ಗಲಾಟೆ ಆಗಿಲ್ಲ. ಈಗಾಗಲೇ ಡಿಸಿ ಮತ್ತು ಎಸ್’ಪಿ ಜೊತೆಗೆ ಮಾತನಾಡಿದ್ದೇನೆ ಎಂದರು.