ಸ್ವಾಮೀಜಿಗಳು ರಾಜಕಾರಣ ಪ್ರವೇಶಿಸುವುದು ಹೊಸತೇನಲ್ಲ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆ ಪ್ರಬಲ ಈಡಿಗ ಸಮುದಾಯದ ಸ್ವಾಮೀಜಿ ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚುನಾವಣೆಗೆ ನಿಲ್ಲುವ ಘೋಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಾರದ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತಾಡಿದ ಸ್ವಾಮೀಜಿ ʻರಾಮರಾಜ್ಯ ಕಲ್ಪನೆಯಲ್ಲಿ ನಾನು ಭಟ್ಕಳದಿಂದ ಪ್ರಾಯೋಗಿಕವಾಗಿ ಸ್ಪರ್ಧಿಸುವ ಯೋಚನೆಯಲ್ಲಿದ್ದೇನೆʼ ಎಂದು ಹೇಳಿದ್ದಾರೆ.
ʻಶಾಸಕಾಂಗದ ಸಮಗ್ರ ಬದಲಾವಣೆಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ೫೦ ಸನ್ಯಾಸಿಗಳು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪ್ರೇರಣೆ ಪಡೆದಿದ್ದೇವೆʼ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ʻಶಾಸಕಾಂಗದ ವ್ಯವಸ್ಥೆ ದಿಕ್ಕು ದೆಸೆ ತಪ್ಪಿದೆ. ಶಾಸಕರು ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ ತೋರುತ್ತಿದ್ದಾರೆ. ರಾಜಕೀಯಕ್ಕೆ ಬರುವುದೇ ಪ್ರಚಾರಕ್ಕಾಗಿ, ಹಣಕ್ಕಾಗಿ, ಸುಖಭೋಗಕ್ಕಾಗಿ ಎಂದು ತಿಳಿದಿದ್ದಾರೆʼ ಎಂದಿರುವ ಸ್ವಾಮೀಜಿ ʻಸನಾತನ ಹಿಂದೂ ಧರ್ಮವನ್ನು ತಿದ್ದಬೇಕುʼ ಎಂದು ಹೇಳಿದ್ದಾರೆ.