ತನ್ನ ತಾಯಿ ಖಾತೆಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಜಮೆಯಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯಾವ ಯೋಜನೆಯ ಹಣ ಎಂದು ಪ್ರಶ್ನಿಸಿದೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ನಾನು ಮನೆಗೆ ಹೋದಾಗ ನನ್ನ ತಾಯಿ ಹೇಳ್ತಾರೆ, ನನ್ನ ಅಕೌಂಟ್ನಲ್ಲಿ ಒಂದು ಲಕ್ಷ ಇದೆ. ಹೇಗಮ್ಮ ಅಂತ ಕೇಳಿದೆ. ನನಗೆ ಗೊತ್ತಿಲ್ಲ, ಸರ್ಕಾರದಿಂದ ಬಂದದ್ದು ಎಂದರು.
ಪ್ರತಿಯೊಬ್ಬರ ರೈತನ ಅಕೌಂಟ್ಗೆ ಇವತ್ತು 1 ಲಕ್ಷ, 2 ಲಕ್ಷ, 3 ಲಕ್ಷ ರೂಪಾಯಿಗಳು ಬಂದಿದ್ದಾವೆ. ಯಾರ ಅಧಿಕಾರದಲ್ಲಿ ನೇರವಾಗಿ ಬಂದಿದ್ರೆ ಅದು ನರೇಂದ್ರ ಮೊದಿ ಸರ್ಕಾರದಲ್ಲಿ ಎಂದು ಹೇಳಿದ್ದರು.
ಇದೀಗ, ಕಟೀಲ್ ಅವರ ಈ ಮಾತಿಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದರ ತಾಯಿಯ ಖಾತೆಗೆ ಕೇಂದ್ರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ? ಎಂದು ಪ್ರಶ್ನಿಸಿದೆ.
ಅಲ್ಲದೇ, ಲಕ್ಷಗಟ್ಟಲೆ ಸಂಬಳ ಪಡೆಯುವವರ ತಾಯಿ ಫಲಾನುಭವಿ ಆದದ್ದು ಹೇಗೆ? ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ? ಅಂತಹ ಯಾವ ಯೋಜನೆ ಇದೆ? ಸಂಸದರು ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಪ್ರಶ್ನಿಸಿದೆ.