ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿ, 450 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ದೇಶದ ಪ್ರಮುಖ ಬಂದರು ಚಿತ್ತಗಾಂಗ್ನ ಹೊರಗೆ 40 ಕಿಲೋಮೀಟರ್ (25 ಮೈಲಿ) ದೂರದಲ್ಲಿರುವ ದೇಶೀಯ ಕಂಟೇನರ್ ಸಂಗ್ರಹಣಾ ಘಟಕದಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯೂ ಲಘುವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದು, 450 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಗ್ನಿ ಅವಘಡಕ್ಕೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಖಾಸಗಿ ಗೋದಾಮಿನಲ್ಲಿದ್ದ ಕೆಲವು ಕಂಟೈನರ್ ಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಸೇರಿದಂತೆ ರಾಸಾಯನಿಕಗಳಿದ್ದವು ಎನ್ನಲಾಗಿದೆ. ಅಪಘಾತದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.