ಸಂಸತ್ ಭದ್ರತಾ ಲೋಪ ಮತ್ತು ಈ ಘಟನೆ ನಂತರದ ಬೆಳವಣಿಗೆಯಲ್ಲಿ ವಿಪಕ್ಷದ 14 ಮಂದಿ ಸಂಸದರನ್ನು ಕಲಾಪದಿಂದ ಅಮಾನತುಗೊಳಿಸಲಾಗಿದೆ ಅಂತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.
ಭದ್ರತಾಲೋಪಕ್ಕೂ ಮತ್ತು ಸಂಸದರ ಅಮಾನತುಗೊಳಿಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಅಂತ ತಿಳಿಸಿರೋ ಓಂ ಬಿರ್ಲಾ, ಕಲಾಪ ನಡೆಸಲು ಬಿಡದೇ ಅಡ್ಡಿಯುಂಟುಮಾಡುವ ಮೂಲಕ ಸದನದ ಘನತೆಗೆ ಚ್ಯುತಿ ಬರುವಂತೆ ಮಾಡಿದ್ದಕ್ಕಾಗಿ ಸಂಸದರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ. ಎಲ್ಲಾ ಸಂಸದರನ್ನುದ್ದೇಶಿಸಿ ಪತ್ರ ಬರೆದಿದ್ದು, ಭದ್ರತಾ ಲೋಪ ಕುರಿತಾಗಿ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ.
ಕಲಾಪಕ್ಕೆ ಇನ್ನಿಲ್ಲದಂತೆ ಅಡ್ಡಿಯುಂಟುಮಾಡುವ ಮೂಲಕ ಸದನದ ಘನತೆಗೆ ಚ್ಯುತಿ ತಂದಿರುವ ಕಾರಣದಿಂದಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಬೇಕು ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಅಂತ ಪ್ರತಿ ಪಕ್ಷಗಳು ಸದನದಲ್ಲಿ ಪಟ್ಟುಹಿಡಿದಿದ್ದವು. ಕಲಾಪ ನಡೆಸಲು ಬಿಡದೆ ಪ್ರತಿಭಟಿಸಿದ ಕಾರಣ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 14 ಸಂಸದರನ್ನು ಅಮಾನತು ಮಾಡಲಾಗಿತ್ತು.
ಸದನದ ಕಲಾಪದಲ್ಲಿ ಅನುಚಿತ ವರ್ತನೆ ಮತ್ತು ಅಡ್ಡಿಪಡಿಸುವಿಕೆಯನ್ನು ನಮ್ಮ ದೇಶದ ಜನರು ಮೆಚ್ಚುವುದಿಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ನಾವು ಸಂಸದೀಯ ಸೌಹಾರ್ದತೆ ಮತ್ತು ಘನತೆಯ ಉನ್ನತ ಗುಣಮಟ್ಟವನ್ನು ಕಾಪಾಡುತ್ತೇವೆ ಎಂದು ಸರ್ವಾನುಮತದಿಂದ ಹೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಗೌರವಾನ್ವಿತ ಸದಸ್ಯರನ್ನು ಅಮಾನತುಗೊಳಿಸುವ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಇದು ನನಗೆ ತೀವ್ರ ವೇದನೆಯನ್ನು ಉಂಟು ಮಾಡಿದೆ ಆದರೂ, ಭವಿಷ್ಯದಲ್ಲಿ, ಎಲ್ಲಾ ಗೌರವಾನ್ವಿತ ಸದಸ್ಯರು ಸದನದ ಘನತೆ ಮತ್ತು ಸೌಹಾರ್ದತೆಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ ಎಂದು ನಿರೀಕ್ಷಿಸುತ್ತೇನೆ. ಲೋಕಸಭೆಯ ಸ್ಪೀಕರ್ ಆಗಿ, ಇದು ಅರ್ಥಪೂರ್ಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ನನ್ನ ಪ್ರಯತ್ನವಾಗಿದೆ. ಎಲ್ಲಾ ಗೌರವಾನ್ವಿತ ಸದಸ್ಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂಬುದು ನನ್ನ ವಿನಂತಿಯಾಗಿದೆ’ ಎಂದು ಸ್ಪೀಕರ್ ಓಂ ಬಿರ್ಲಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.