ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ವಿಭಿನ್ನ ಸಿನಿಮಾಗಳನ್ನು ಚಿತ್ರಪ್ರೇಮಿಗಳ ಮಡಿಲಿಗೆ ಹಾಕುತ್ತಾ ಬರ್ತಿದ್ದಾರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್-1978’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ಸದ್ಯ ‘19.20.21’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಚಿತ್ರತಂಡ ವಿಶೇಷವಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಬಾಯಿಗೆ ಬಟ್ಟೆ ಕಟ್ಟಿರುವ ವ್ಯಕ್ತಿ, ಆತನ ಬೆನ್ನು, ಬಾಯಲ್ಲಿ ರಕ್ತದ ಕಲೆ ಇರುವ ಕೌತುಕ ಮೂಡಿಸುವ ಒಂದು ಪೋಸ್ಟರ್ ಅನ್ನು ಮಂಸೋರೆ ಬಳಗ ಅನಾವರಣ ಮಾಡಿದೆ.
ಜೈ ಭೀಮ್, ಜನಗಣಮನ ಸಿನಿಮಾಗಳ ಮಾದರಿಯಲ್ಲಿ ‘19.20.21’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ಶೃಂಗ, ಸಂಪತ್ ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಲೆ ಮುಂತಾದ ತಾರಾಬಳಗ ಚಿತ್ರದಲ್ಲಿದೆ.
‘ಆ್ಯಕ್ಟ್-1978’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು , ಬಿಂದುಮಾಲಿನಿ ಸಂಗೀತ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಶಿವು ಬಿಕೆ ಕುಮಾರ್ ಕ್ಯಾಮೆರಾ, ಸುರೇಶ್ ಆರುಮುಗಂ ಸಂಕಲನವಿದೆ.
ಚಿತ್ರಕಥೆಯಲ್ಲಿ ಮಂಸೋರೆ ಜೊತೆಗೆ ವೀರೇಂದ್ರ ಮಲ್ಲಣ್ಣ ಲೇಖನಿ ಹಂಚಿಕೊಂಡಿದ್ದರೆ, ಸಂಭಾಷಣೆಗಳ ಬರವಣಿಗೆಯಲ್ಲಿ ಅವಿನಾಶ್ ಜಿ ಮತ್ತು ವೀರೇಂದ್ರ ಮಲ್ಲಣ್ಣ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತಂಡ, ಈಗ ಸಂಕಲನ ಮುಗಿಸಿ ಮುಂದಿನ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದ್ದಾರೆ.