ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದು,. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುವ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ಕಾಂತಾರ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದು,ರಾಜಮೌಳಿಯವರ ಆರ್ ಆರ್ ಆರ್, ಪ್ರಶಾಂತ್ ನೀಲ್ ಅವರ ಕೆಜಿಎಫ್ 2 ಚಿತ್ರಕ್ಕಿಂತಲೂ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರ ಅತಿಹೆಚ್ಚು IMDb ರೇಟಿಂಗ್ ಪಡೆದಿದೆ.
ಸೆ. 30ರಂದು ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸು ಗಳಿಸಿರುವ ‘ಕಾಂತಾರ’ವನ್ನು ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರಾವಳಿ ಸಂಸ್ಕೃತಿಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ರಿಷಬ್ ಶೆಟ್ಟಿಗೆ ಪ್ರೇಕ್ಷಕ ಪ್ರಭುಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿಯೂ ಬಿಡುಗಡೆಯಾದ ‘ಕಾಂತಾರ’ ಭರ್ಜರಿ ಕಮಾಯಿ ಮಾಡುತ್ತಿದೆ.
ಇದೀಗ IMDb ನಲ್ಲಿಯೂ ಕಾಂತಾರ ಕಮಾಲ್ ಮಾಡಿದ್ದು, ನಿರ್ಮಾಪಕ-ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಈ ಚಿತ್ರ 10 ರಲ್ಲಿ 9.5 ರೇಟಿಂಗ್ನೊಂದಿಗೆ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಆರಂಭದಿಂದಲೂ ಐಎಂಡಿಬಿಯಲ್ಲಿ ‘ಕಾಂತಾರ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಸ್ತುತ ಈ ಸಿನಿಮಾ 10ಕ್ಕೆ 9.5 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ದೇಶದಲ್ಲಿಯೇ ಗರಿಷ್ಠ ರೇಟಿಂಗ್ ಪಡೆದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದಿನಿಂದ ‘ಕಾಂತಾರ’ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದೆ. ಶೀಘ್ರವೇ ಇನ್ನುಳಿದ ಭಾಷೆಗಳಲ್ಲಿಯೂ ರಿಲೀಸ್ ಆಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಕಮಾಲ್ ಮಾಡಲು ಸಜ್ಜಾಗಿದೆ. ಗಳಿಕೆಯಲ್ಲಿ ಸದ್ಯದಲ್ಲಿಯೇ 100 ಕೋಟಿ ಕ್ಲಬ್ ಸೇರಲಿರುವ ‘ಕಾಂತಾರ’ ಸಿನಿಮಾವು ಐಎಂಡಿಬಿಯಲ್ಲಿ ಅತಿ ಹೆಚ್ಚು ವೋಟ್ ಮತ್ತು ರೇಟಿಂಗ್ ಪಡೆದುಕೊಂಡ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.