2023ರ ಚುನಾವಣೆಯೇ ಕೊನೆ, ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ, ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಈ ಕುರಿತು ಮಾತನಾಡಿದ ಅವರು, ವರುಣ, ಚಾಮುಂಡೇಶ್ವರಿ, ಹುಣಸೂರು, ಚಾಮರಾಜಪೇಟೆ, ಹೆಬ್ಬಾಳ, ಬಾದಾಮಿ, ಕೋಲಾರ ಸೇರಿದಂತೆ ಮತ್ತಷ್ಟು ಕ್ಷೇತ್ರದ ಜನ ಕರೆಯುತ್ತಿದ್ದಾರೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ ಎಂದರು.
ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ತೋ ಅಲ್ಲಿಯೇ ಸೋಲಿಸಿದರು. ಹಾಗಂತ ಬೇಸರ ಮಾಡಿಕೊಳ್ಳೋಕೆ ಆಗಲ್ಲ. ಬರೋಬ್ಬರಿ ಐದು ಬಾರಿ ಚಾಮುಂಡೇಶ್ವರಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿಯನ್ನು ನಾನು ಯಾವಾಗಲೂ ಮರೆಯಲ್ಲ. ಚುನಾವಣೆಗೆ 1 ವರ್ಷ ಬಾಕಿ ಇದೆ ಮುಂದೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಅವರು, ನನಗೆ 2023 ರ ಚುನಾವಣೆಯೇ ಕೊನೆ. ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಹುಟ್ಟೂರಾದ ಸಿದ್ದರಾಮನ ಹುಂಡಿಯ ಜಾತ್ರೆಯಲ್ಲಿ ಸಿದ್ದರಾಮಯ್ಯ ವೀರಕುಣಿತಕ್ಕೆ ಹೆಜ್ಜೆಹಾಕಿದ್ದಾರೆ. ತಮ್ಮ ಗೆಳೆಯರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ವೀರಕುಣಿತಕ್ಕೆ ಹೆಜ್ಜೆ ಹಾಕಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.