ನ್ಯಾಯಾಲಯವನ್ನೇ ಯಾಮಾರಿಸಲು ಹೋಗಿ ನ್ಯಾಯಾಲಯದ ಕೈಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನ ನಗರದಲ್ಲಿರುವ ಜನಪ್ರಿಯ ಆಸ್ಪತ್ರೆ (Janapriya Hospital) ಮಾಲೀಕ ಡಾ.ಅಬ್ದುಲ್ ಬಶೀರ (Dr.Abdul Basheer) ಕಥೆ.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅಪರೂಪ ಎನ್ನಬಹುದಾದ ಪ್ರಕರಣದಲ್ಲಿ ಹಾಸನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆನಂದ್ (Sri. Anand, III Addl. District & Sessions Judge, Hassan) ಅವರು ಕೊಟ್ಟಿರುವ ಮಹತ್ವದ ಆದೇಶ ಈಗ ಎಲ್ಲೆಡೆ ಚರ್ಚಿತವಾಗಿದೆ.

ಹಾಸನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆನಂದ್ ಅವರು (Sri. Anand, III Addl. District & Sessions Judge, Hassan)
ಹಾಸನ ನಗರದಲ್ಲಿ (Hassan City) ಡಾ.ಅಬ್ದುಲ್ ಬಶೀರ ಜನಪ್ರಿಯ ಆಸ್ಪತ್ರೆ ಆರಂಭಿಸಿದ್ದು 2014ರಲ್ಲಿ. ಇದೇ ಅವಧಿಯಲ್ಲಿ ಹಾಸನ ನಗರದ ಗಲ್ಲಿಯೊಂದರ ಮನೆಯಲ್ಲಿ ನಡೆದಿದ್ದ ಅವಘಡವೊಂದನ್ನು ಬಳಸಿಕೊಂಡು ನ್ಯಾಯಾಲಯಕ್ಕೆ ಖೊಟ್ಟಿ, ಫೋರ್ಜರಿ ದಾಖಲೆಗಳನ್ನು ಸಲ್ಲಿಸಿ ಅಪಘಾತ ವಿಮೆ ದುಡ್ಡು ಹೊಡೆಯಲು ಹೋಗಿ ನ್ಯಾಯಾಧೀಶರ ಕೈಯಲ್ಲೇ ಸಿಕ್ಕಿಬಿದ್ದಿದ್ದಾರೆ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್ ಬಶೀರ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಹಾಸನದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಆನಂದ್ (III Addl. District & Sessions Judge, Hassan) ಅವರ ಪೀಠದಲ್ಲಿ ನಡೆದ ಈ ಪ್ರಕರಣದಲ್ಲಿ ಡಾ.ಅಬ್ದುಲ್ ಬಶೀರ ವಾದಿ ಸಾಕ್ಷಿ 2.
ಮೇ 26, 2014ರಂದು ಮೊಹಮ್ಮದ್ ಗೌಸ್ ಮತ್ತು ಆತನ ತಂದೆ ತಮ್ಮ ಮನೆಯಲ್ಲಿ ಪಾರಿವಾಳ ಹಿಡಿಯಲು ಪ್ರಯತ್ನಿಸ್ತಿದ್ದಾಗ ಗೌಸ್ ಮನೆ ಮೇಲಿಂದ ಬಿದ್ದ. ತಕ್ಷಣವೇ ಆತನನ್ನು ಅವನ ತಂದೆ ಫಯಾಜ್ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ಗೌಸ್‌ನನ್ನು ಪರೀಕ್ಷಿಸಿದ್ದ ಆಗ ಡ್ಯೂಟಿ ಡಾಕ್ಟರ್ ಆಗಿದ್ದ ಡಾ.ಪ್ರಕಾಶ್ ಅವರು ಗೌಸ್‌ಗೆ ಮೇಲಿಂದ ಬಿದ್ದು ಸಣ್ಣಪುಟ್ಟ ಗಾಯಗಳಾಗಿದೆ ಎಂದು MLC (ಮೆಡಿಕೋ ಲೀಗಲ್ ಕೇಸ್) ವರದಿಯನ್ನೂ ಕೊಟ್ಟರು ಮತ್ತು ಆ ವರದಿಗೆ ಗೌಸ್ ತಂದೆ ಫಯಾಜ್ ಸಹಿ ಕೂಡಾ ಇತ್ತು.
ನ್ಯಾಯಾಲಯದಲ್ಲಿ ವಾದಿ ಸಾಕ್ಷಿಯಾಗಿ ಹಾಜರಾಗಿದ್ದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್ ಬಶೀರ ವಾದಿ ಮೊಹಮ್ಮದ್ ಗೌಸ್‌ನ ಬಲಗಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆಯೆಂದೂ, ಆತ ಶಾಶ್ವತ ದೈಹಿಕ ವೈಕಲ್ಯವನ್ನು ಹೊಂದಿದ್ದಾನೆಂದೂ, ಆತನ ಶಸ್ತ್ರಚಿಕಿತ್ಸೆಗಾಗಿ 1 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದೂ ಸಾಕ್ಷಿ ಹೇಳಿದ್ದರು.

ಗಾಂಧಿ ಪುತ್ಥಳಿ ಎದುರು ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್ ಬಶೀರ
ಜನಪ್ರಿಯ ಆಸ್ಪತ್ರೆಯ ಡಾ.ಅಬ್ದುಲ್ ಬಶೀರ ಕೊಟ್ಟಿದ್ದ ಸರ್ಜರಿಯ ಈ ಖೊಟ್ಟಿ ದಾಖಲೆಗಳನ್ನೇ ಬಳಸಿಕೊಂಡು ಮೊಹಮ್ಮದ್ ಗೌಸ್ ತನಗೆ ಅಪಘಾತ ವಿಮೆ ರೂಪದಲ್ಲಿ 10 ಲಕ್ಷ ರೂಪಾಯಿ ಕೊಡಿಸುವಂತೆ ಹಾಸನದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ನ್ಯಾಯಾಲಯದಲ್ಲೇ ಡಾ.ಬಶೀರ ಲಾಕ್:
ಡಾ.ಅಬ್ದುಲ್ ಬಶೀರ ತನ್ನ ಸಾಕ್ಷ್ಯವನ್ನು ಸಮರ್ಥನೆ ಮಾಡಿಕೊಳ್ಳುವ ಸಲುವಾಗಿ ಮೇ 26ರಂದು ಹಾಸನದ ಓಲ್ಡ್ ಮಟನ್ ಮಾರ್ಕೆಟ್‌ನಲ್ಲಿ ಮೊಹಮ್ಮದ್ ಗೌಸ್‌ಗೆ ಸಂಜೆ 4 ಗಂಟೆಗೆ ಅಪಘಾತವಾಗಿತ್ತೆಂದೂ, ಆ ಬಳಿಕ ಹಾಸನ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದ ನಂತರ ತನ್ನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ದಾಖಲೆಗಳನ್ನು ಸಲ್ಲಿಸಿದ್ದರು.
ಡಾ.ಅಬ್ದುಲ್ ಬಶೀರ ಸಲ್ಲಿಸಿದ್ದ ಈ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದಾಗ ಮೊಹಮ್ಮದ್ ಗೌಸ್ ಮೊದಲಿಗೆ ದಾಖಲಾಗಿದ್ದು ಹಾಸನ ನಗರದ ಸರ್ಕಾರಿ ಆಸ್ಪತ್ರೆಗೆ ಮತ್ತು ಆತನನ್ನು ಅಡ್ಮಿಟ್ ಮಾಡಿದ್ದು ಆತನ ತಂದೆ ಫಯಾಜ್ ಎಂದೂ, ಆಗ ಆತನನ್ನು ಪರೀಕ್ಷೆ ನಡೆಸಿದ್ದ ಡ್ಯೂಟಿ ಡಾಕ್ಟರ್ ಪ್ರಕಾಶ್ ಅವರು ಸಂಜೆ 5 ಗಂಟೆಗೆ ಕೊಟ್ಟ ಮೊದಲ MLC ವರದಿ ಪ್ರಕಾರ ಸಂಜೆ 4.45ಕ್ಕೆ ಗೌಸ್‌ಗೆ ತನ್ನ ಮನೆಯಲ್ಲೇ ಮೇಲ್ಗಡೆಯಿಂದ ಬಿದ್ದು ಗಾಯಗಳಾಗಿದೆ ಎಂದೂ, ಆ MLC ವರದಿಗೆ ಗೌಸ್‌ನ ತಂದೆ ಫಯಾಜ್‌ನ ಸಹಿ ಕೂಡಾ ಇತ್ತು.
ಮೊದಲನೇ MLC ವರದಿಗೆ ಹಾಸನ ನಗರ ಆಸ್ಪತ್ರೆಯಲ್ಲಿ ನೀಡಲಾಗಿದ್ದ ಸೀರಿಯಲ್ ಸಂಖ್ಯೆ 164(a) ಮತ್ತು ಮೊದಲು ಗೌಸ್‌ಗೆ ನೀಡಲಾಗಿದ್ದ ಹೊರರೋಗಿ (OPD) ಸಂಖ್ಯೆ 1534590.

ಈ ಪ್ರಕರಣದಲ್ಲಿ ಪ್ರತಿವಾದಿ ವಕೀಲರಾಗಿದ್ದ ಹಿರಿಯ ವಕೀಲ ಮೊಹಮ್ಮದ್ ಇಮ್ರಾನ್ ಅಹ್ಮದ್
ಆದರೆ ಎರಡನೇ ಎಂಎಲ್‌ಸಿ ವರದಿ 165(a) ಮತ್ತು ಹೊಸದಾಗಿ ನೀಡಲಾಗಿದ್ದ ಹೊರರೋಗಿ (OPD) ಸಂಖ್ಯೆ (1534591)ಯಲ್ಲಿ ಸಂಜೆ 4.30ಕ್ಕೆ ಮಟನ್ ಮಾರ್ಕೆಟ್‌ನಲ್ಲಿ ಬೈಕ್ ಆಕ್ಸಿಡೆಂಟ್‌ನಿಂದ ಗಾಯಗೊಂಡಿದ್ದಾಗಿ ಹೇಳಲಾಗಿತ್ತು.
ನ್ಯಾಯಾಲಯದ ಮುಂದೆ ಸಾಕ್ಷಿ ಹೇಳಿದ್ದ ಡಾ.ಅಬ್ದುಲ್ ಬಶೀರ ತನ್ನ ಜನಪ್ರಿಯ ಆಸ್ಪತ್ರೆಗೆ ಕರೆತರುವುದಕ್ಕೂ ಮೊದಲು ಮೊಹಮ್ಮದ್ ಗೌಸ್‌ಗೆ ಹಾಸನ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂಬ ಮಾಹಿತಿ ತಮಗಿತ್ತು ಎಂದು ಒಪ್ಪಿಕೊಂಡಿದ್ದರು.
ಹೀಗಿದ್ದರೂ ಕೂಡಾ ಮೊದಲನೇ MLC ವರದಿ ಪ್ರಕಾರವೇ ಕಾರ್ಯನಿರ್ವಹಿಸಬೇಕಿದ್ದ ಡಾ,ಅಬ್ದುಲ್ ಬಶೀರ ಮೊದಲನೇ MLC ವರದಿಯ ಅಂಶಗಳನ್ನು ಕಡೆಗಣಿಸಿ ಪ್ರಾಥಮಿಕ ದಾಖಲೆಗಳನ್ನು ದೃಢೀಕರಿಸಿಕೊಳ್ಳದೇ, ಪೊಲೀಸರಿಗೆ ಮಾಹಿತಿಯನ್ನೂ ನೀಡದೇ ಹೊಸ MLC ವರದಿಯನ್ನು ಸೃಷ್ಟಿಸಿದರು.
ಡಾ.ಅಬ್ದುಲ್ ಬಶೀರ ವೃತ್ತಿ ಹೊಣೆಗಾರಿಕೆಯಲ್ಲಿ ಗಂಭೀರ ಲೋಪವನ್ನು ಎಸಗಿದ್ದಾರೆ ಎಂದೂ, ಹಾಸನ ನಗರ ಸರ್ಕಾರಿ ಆಸ್ಪತ್ರೆ ದಾಖಲೆಗಳಿಗೆ ತದ್ವಿರುದ್ಧದ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ವೃತ್ತಿ ದುರ್ನಡತೆ ತೋರಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏಮ್ಸ್‌ನಂತ (AIIMS) ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಸುತ್ತೋಲೆ ಪ್ರಕಾರ ಯಾವುದೇ ಆಸ್ಪತ್ರೆಯಲ್ಲಾದರೂ ಒಂದು ಬಾರಿ ಮೆಡಿಕೋ ಲೀಗಲ್ ಕೇಸ್ (MLC) ನೋಂದಣಿಯಾದ್ರೆ ಅದೇ ಎಂಎಲ್‌ಸಿ (MLC) ನಂಬರ್‌ನ್ನೇ ಆ ರೋಗಿಯ ಮುಂದಿನ ಚಿಕಿತ್ಸೆಯ ವೇಳೆ ಬಳಸಿಕೊಳ್ಳಬೇಕು. ಬೇರೊಂದು ಆಸ್ಪತ್ರೆಗೆ ಆ ರೋಗಿಯನ್ನು ವರ್ಗಾಯಿಸಿದರೂ ಆಗ ಈಗಾಗಲೇ ನೋಂದಣಿಯಾಗಿರುವ ಎಂಎಲ್‌ಸಿ (MLC) ಸಂಖ್ಯೆಯನ್ನೇ ಬಳಸಿಕೊಳ್ಳಬೇಕೇ ಹೊರತು ಹೊಸ ಎಂಎಲ್‌ಸಿ (MLC) ಅಥವಾ 2ನೇ ಎಂಎಲ್‌ಸಿ (MLC) ಸಂಖ್ಯೆಯನ್ನು ಸೃಷ್ಟಿಸುವಂತಿಲ್ಲ. ಮೆಡಿಕೋ ಲೀಗಲ್ ಎವಿಡೆನ್ಸ್‌ನ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ನಕಲಿತನ ಮತ್ತು ದಾಖಲೆಗಳನ್ನು ತಿರುಚುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದು ನ್ಯಾಯಾಧೀಶ ಆನಂದ್ ಅವರು ತಮ್ಮ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಜನಪ್ರಿಯ ಆಸ್ಪತ್ರೆಯ ಡಾ.ಅಬ್ದುಲ್ ಬಶೀರ ನಿಯಮಗಳಿಗೆ ವಿರುದ್ಧವಾಗಿ ಹೊಸ ಎಂಎಲ್‌ಸಿಯನ್ನು (MLC) ಸೃಷ್ಟಿಸಿದ್ದಾರೆ ಮತ್ತು ಹೀಗಾಗಿ ಜನಪ್ರಿಯ ಆಸ್ಪತ್ರೆಯಲ್ಲಿ (Janapriya Hospital) ಚಿಕಿತ್ಸೆ ಪಡೆಯಲಾಯಿತು ಎಂದು ಸಲ್ಲಿಸಿದ್ದ ದಾಖಲೆಗಳ ಅಸಲಿತನ ಮತ್ತು ವಿಶ್ವಾಸರ್ಹತೆಯ ಮೇಲೆ ಅನುಮಾನ ಉಂಟಾಗಿದೆ.
ಹಿಮ್ಸ್ (HIMS) ವೈದ್ಯಾಧಿಕಾರಿಯೂ ಶಾಮೀಲು:
ಅಂದಹಾಗೆ ಹಾಸನದ ಸರ್ಕಾರಿ (Hassan) ಅಸ್ಪತ್ರೆಯಲ್ಲಿ ಎರಡನೇ MLC ಸಂಖ್ಯೆ ಮತ್ತು ಎರಡನೇ OPD ಸಂಖ್ಯೆಯನ್ನು ಸೃಷ್ಟಿಸಿ ಅಪಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿ ನ್ಯಾಯಾಲಯವನ್ನೇ ಯಾಮಾರಿಸಿದ್ದರಲ್ಲಿ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ನಾಗರಾಜ್ ಪಾತ್ರದ ಬಗ್ಗೆಯೂ ಆದೇಶದಲ್ಲಿ ನ್ಯಾಯಾಧೀಶ ಆನಂದ್ ಅವರು ಕಟು ಟಿಪ್ಪಣಿ ಮಾಡಿದ್ದಾರೆ.
ಅವಘಡ ನಡೆದ ದಿನ (ಮೊಹಮ್ಮದ್ ಗೌಸ್ ಮನೆ ಮೇಲಿಂದ ಬಿದ್ದ ದಿನ) ಡಾ ನಾಗರಾಜ್ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ (duty doctor) ಆಗಿರಲಿಲ್ಲ. ಎರಡನೇ ಎಂಎಲ್‌ಸಿ (MLC) ವರದಿಯನ್ನು ಸೃಷ್ಟಿಸುವ ಮೊದಲು ಮತ್ತು ಮೊಹಮ್ಮದ್ ಗೌಸ್‌ಗೆ ಹೊಸದಾಗಿ ಒಪಿಡಿ (OPD) ರೋಗಿ ಸಂಖ್ಯೆಯನ್ನು ಕೊಡುವ ಮೊದಲು ಮೂಲ ದಾಖಲೆಗಳನ್ನು ಡಾ.ನಾಗರಾಜ್.ಕೆ. ಪರಿಶೀಲನೆ ನಡೆಸಿರಲಿಲ್ಲ. ತನ್ನ ಸೂಚನೆಯ ಮೇರೆಗೆ 2ನೇ ಎಂಎಲ್‌ಸಿ ವರದಿ ಮತ್ತು ಒಪಿಡಿ ಸಂಖ್ಯೆಯನ್ನು ನೀಡಲಾಗಿತ್ತು ಎಂದು ಹಿಮ್ಸ್‌ನ ವೈದ್ಯಾಧಿಕಾರಿಯೂ (HIMS Medical Officer) ಆಗಿರುವ ಡಾ ನಾಗರಾಜು.ಕೆ. ತಪ್ಪೊಪ್ಪಿಕೊಂಡಿದ್ದರು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಮೆಡಿಕೋ ಲೀಗಲ್ ಕೇಸ್ ವರದಿಗಳ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ, MLC ವರದಿಗಳ ನಕಲಿತನ ಮತ್ತು ತಿರುಚುವಿಕೆಯನ್ನು ತಡೆಗಟ್ಟಬೇಕಿರುವುದು ಸರ್ಕಾರಿ ವೈದ್ಯಾಧಿಕಾರಿಯ ಕರ್ತವ್ಯ ಎಂದು ನ್ಯಾಯಾಧೀಶ ಆನಂದ್ ಅವರು ಅದೇಶದಲ್ಲಿ ಟಿಪ್ಪಣಿ ಮಾಡಿದ್ದಾರೆ.
ಇದು ಗಂಭೀರ ಸ್ವರೂಪದ ವೃತ್ತಿ ನಿರ್ಲಕ್ಷತೆ ಮತ್ತು ಮೆಡಿಕೋ ಲೀಗಲ್ ಕೇಸ್‌ನ ಕರ್ತವ್ಯದ ಪಾಲನೆಯಲ್ಲಿ ದುರ್ನತಡೆಯಾಗಿದ್ದು, ಈ ಕಾರಣದಿಂದ ನ್ಯಾಯಾಲಯದ ಹಾದಿ ತಪ್ಪಿಸಿ ನ್ಯಾಯ ದಾನ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲಾಗಿದೆ ಎಂದು ನ್ಯಾಯಾಧೀಶ ಆನಂದ್ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಅಪಘಾತವಾಗಿದೆ ಎಂದು ಸುಳ್ಳು ಹೇಳಿ ನ್ಯಾಯಾಲಯಕ್ಕೆ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿದ ಈ ಪ್ರಕರಣದಲ್ಲಿ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆನಂದ್ (Sri. Anand, III Addl. District & Sessions Judge, Hassan) ಅವರು ವಾದಿ ಮೊಹಮ್ಮದ್ ಗೌಸ್, ವಾದಿ ಸಾಕ್ಷಿ ಡಾ.ಅಬ್ದುಲ್ ಬಶೀರ, ಡಾ.ನಾಗರಾಜ್.ಕೆ. ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಆದೇಶಿಸಿದ್ದಾರೆ.
ಇದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದೆ ಎನ್ನುವುದು ವಿಶೇಷ.


