ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗೆ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೆಣಸಲಿದೆ. ಈ ಬಾರಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ. 65 ದಿನಗಳ ನಡೆಯಲಿರುವ ಈ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಕೆಲ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ.
ತಂಡಗಳ ಪ್ರಕಾರ ಆರಂಭಿಕ ಪಂದ್ಯಗಳಲ್ಲಿ ಅಲಭ್ಯರಾಗುವ ಆಟಗಾರರ ಪಟ್ಟಿ :
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಹ್ಯಾಝಲ್ವುಡ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ಕಾಣಿಸಿಕೊಳ್ಳುವುದಿಲ್ಲ. ಮ್ಯಾಕ್ಸ್ವೆಲ್ ತಮ್ಮ ವಿವಾಹದ ಕಾರಣ IPL 2022 ರ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಸನ್ ರೈಸರ್ಸ್ ಹೈದರಾಬಾದ್: ಮಾರ್ಕೊ ಜಾನ್ಸೆನ್, ಐಡೆನ್ ಮಾರ್ಕ್ರಾಮ್ ಮತ್ತು ಸೀನ್ ಅಬಾಟ್ ಅವರ ಸೇವೆಯನ್ನು ತಪ್ಪಿಸಿಕೊಳ್ಳಲಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್ಗಿಡಿ ಅವರು ರಾಷ್ಟ್ರೀಯ ತಂಡಗಳ ಪರ ಆಡುತ್ತಿದ್ದಾರೆ. ಹೀಗಾಗಿ ಈ ಆಟಗಾರರು ಡೆಲ್ಲಿ ತಂಡದ ಮೂರು-ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಗುಜರಾತ್ ಟೈಟಾನ್ಸ್: ಡೇವಿಡ್ ಮಿಲ್ಲರ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಡ್ವೈನ್ ಪ್ರಿಟೋರಿಯಸ್ ಹಾಗೂ ಗಾಯಗೊಂಡಿರುವ ದೀಪಕ್ ಚಹರ್ ಕೂಡ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
ಮುಂಬೈ ಇಂಡಿಯನ್ಸ್: ಜೋಫ್ರಾ ಆರ್ಚರ್ ಅವರು ಗಾಯದ ಕಾರಣದಿಂದ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್: ಪ್ಯಾಟ್ ಕಮಿನ್ಸ್ ಮತ್ತು ಆರೋನ್ ಫಿಂಚ್ ಏಪ್ರಿಲ್ 5 ರ ಬಳಿಕವಷ್ಟೇ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ಕೂಡ ಪಾಕಿಸ್ತಾನ್ ವಿರುದ್ದ ಸರಣಿ ಆಡಬೇಕಿದ್ದು, ಹೀಗಾಗಿ ಏಪ್ರಿಲ್ 6 ರ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ರಾಜಸ್ಥಾನ್ ರಾಯಲ್ಸ್: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಪಂಜಾಬ್ ಕಿಂಗ್ಸ್: ಜಾನಿ ಬೈರ್ಸ್ಟೋವ್ ಮತ್ತು ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಅಲಭ್ಯರಾಗಿದ್ದಾರೆ.
https://youtu.be/ihOEoNnfIT8