ನಿಮ್ಮನ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ರೂ. ಕೊಡಿ ಅಂತ ಕೇಳಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಿಂದ ಬಂದ ಕೆಲವರು 2500 ಕೋಟಿ ರೂ. ಕೊಡಿ ನಿಮ್ಮನ್ನೇ ಸಿಎಂ ಮಾಡ್ತೀವಿ ಎಂದು ಕೇಳಿದ್ದರು ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ರಾಜಕಾರಣದ ಮೋಸ ಮಾಡುವವರು ಹೆಚ್ಚಾಗಿದ್ದಾರೆ. ಟಿಕೆಟ್ ಕೊಡಿಸ್ತೀವಿ, ದಿಲ್ಲಿಗೆ ಕರೆದುಕೊಂಡು ಹೋಗಿ ಸೋನಿಯಾ ಗಾಂಧಿ, ನಡ್ಡಾ ಭೇಟಿ ಮಾಡಿಸ್ತೀವಿ ಅಂತಾರೆ. ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ಸಿಎಂ ಮಾಡ್ತೀವಿ 2500 ಕೋಟಿ ರೂ. ರೆಡಿ ಮಾಡಿ ಇಡಿ ಅಂದಿದ್ರು, ಟಿಕೆಟ್ ಕೊಡ್ತೀನಿ ಅಂತ ರಾಜಕಾರಣದಲ್ಲಿ ಮೋಸ ಮಾಡ್ತಾರೆ. ಅಲ್ಲಿ ಇಲ್ಲಿ ಹೋಗಿ ಮೋಸ ಹೋಗಬೇಡಿ ಎಂದ ಯತ್ನಾಳ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಶ್ರೀರಾಮುಲು ಹಾಗೂ ಸಿಸಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕ ಯತ್ನಾಳ್ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬೇಕು ಅಂತಾ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯಲ್ಲಿ ಸಿಎಂ ಆಗಲು 2,500 ಕೋಟಿ ಬೇಕು ಅಂದಿದ್ದಾರೆ. ಸಚಿವರಾಗಲು 100 ಕೋಟಿ ಹಣ ಬೇಕು ಅಂತಾ ಹೇಳಿದ್ದಾರೆ. ಇದು ಗಂಭೀರ ವಿಚಾರ, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಶಾಸಕ ಯತ್ನಾಳ್ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದವರು. ಅವರ ಹೇಳಿಕೆ ಸಾಮಾನ್ಯವಾಗಿ ಪರಿಗಣಿಸುವುದು ಸರಿಯಲ್ಲ ಅಂತಾ ಡಿಕೆಶಿ ಹೇಳಿದ್ದಾರೆ.