ರಾಜ್ಯದ ಪಠ್ಯ ಪುಸ್ತಕಗಳಲ್ಲಿ ಮಲಯಾಳಂ ನಟನ ಚಿತ್ರ ಬಳಕೆಯಾಗಿದ್ದು, ಮಲಯಾಳಂ ನಟ ಕುಂಚಾಕೊ ಬೋಬನ್ ಅವರು ಕರ್ನಾಟಕ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕದಲ್ಲಿ ಪೋಸ್ಟ್ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಅವರು, ಅಂತಿಮವಾಗಿ ನನಗೆ ಕರ್ನಾಟಕ ಸರ್ಕಾರದಿಂದ ಸರ್ಕಾರಿ ಕೆಲಸ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕದಲ್ಲಿ ಪೋಸ್ಟ್ಮ್ಯಾನ್ ಆಗಿ ಕುಂಚಾಕೊ ಬೋಬನ್ ಅವರ ಫೋಟೋವನ್ನು ಮೂಲತಃ ‘ಒರಿದಾತೊರು ಪೋಸ್ಟ್ಮ್ಯಾನ್’ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ, ಅಲ್ಲಿ ಅವರು ರಘುನಂದನ್ ಎಂಬ ಪೋಸ್ಟ್ಮ್ಯಾನ್ ಪಾತ್ರವನ್ನು ನಿರ್ವಹಿಸಿದ್ದರು.
ಅಂದಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು @BCNagesh_bjp ಮತ್ತು @nimmasuresh ಸ್ಪಷ್ಟಪಡಿಸಬೇಕು.
ಈ ಮೂಲಕ ಬಿಜೆಪಿ ಅವ್ಯವಸ್ಥೆಯಿಂದ ಇಡೀ ದೇಶದ ಎದುರು ರಾಜ್ಯ ತಲೆತಗ್ಗಿಸುವಂತಾಗಿದೆ.
— DK Suresh (@DKSureshINC) January 31, 2022
ಬಾಬನ್ ಅವರು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ಕಾಲೆಳೆದಿದ್ದಾರೆ. ಈಗ ಈ ವಿಚಾರವಾಗಿ ಡಿ.ಕೆ. ಸುರೇಶ್ ಅವರು ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಕುಸಿಯುತ್ತಿದೆ. ಅಂದ ಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿ.ಸಿ. ನಾಗೇಶ್ ಮತ್ತು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಬೇಕು. ಬಿಜೆಪಿ ಸರಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ತರಗತಿಯೊಂದರ ಪುಸ್ತಕದಲ್ಲಿ “ಅಂಚೆಯಣ್ಣ” ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿರುವ ಸಂಸದ ಡಿ.ಕೆ.ಸುರೇಶ್ ಅವರ ಅವಸರದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಡಿಕೆ ಸುರೇಶ್ ರವರೇ, ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು. ಇದು ಖಂಡಿತ ನಮ್ಮ ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಆಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ ಎಂದಿದ್ದಾರೆ.