ಅನುಮತಿ ಪಡೆಯದೆ ರಸ್ತೆ ಅಗೆದರೆ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ಕೆಲವು ರಸ್ತೆಗಳ ಕೆಳಗೆ ವಿದ್ಯುತ್ ಕೇಬಲ್ಳು ಹಾಗೂ ಜಲಮಂಡಳಿಯವರು ಅಳವಡಿಸಿರುವ ಕುಡಿಯುವ ನೀರಿನ ಕೊಳವೆಗಳು ಇರುತ್ತವೆ. ಅವುಗಳಿಗೆ ಹಾನಿ ಉಂಟಾದಾಗ, ದುರಸ್ತಿಪಡಿಸಲು ರಸ್ತೆ ಅಗೆಯಬೇಕಾಗುತ್ತದೆ. ಆದರೆ, ಇದಕ್ಕೆ ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಅಭಿವೃದ್ಧಿಪಡಿಸಿದ ರಸ್ತೆಯನ್ನು ಒಮ್ಮೆ ಕತ್ತರಿಸಿದರೆ, ಬಳಿಕ ಎಷ್ಟೇ ದುರಸ್ತಿ ಮಾಡಿದರೂ ಅದನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲು ಸಾಧ್ಯವಾಗದು. ಬಿಬಿಂಪಿಯ ಸ್ವಾಧೀನದಲ್ಲಿರುವ ರಸ್ತೆಯನ್ನು ಯಾರಾದರೂ ಅಕ್ರಮವಾಗಿ ಅಗೆದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಮ್ಮ ಸ್ವಾಧೀನದಲ್ಲಿರುವ ರಸ್ತೆಗಳ ಸುರಕ್ಷತೆ ನಮ್ಮ ಅಧಿಕಾರಿಗಳದ್ದೇ ಹೊಣೆ ಎಂದು ಸ್ಪಷ್ಟಪಡಿಸಿದರು.
ಹಲವಾರು ಪ್ರಕರಣಗಳಲ್ಲಿ ಬಿಬಿಎಂಪಿಯ ಅನುಮತಿ ಪಡೆಯದೆಯೇ ರಸ್ತೆ ಅಗೆಯಲಾಗುತ್ತಿದೆ. ಈ ರೀತಿ ಅಕ್ರಮವಾಗಿ ರಸ್ತೆ ಅಗೆಯುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಿದ್ದೇವೆ. ಅದಕ್ಕೆ ಕಡಿವಾಣ ಹಾಕಲು ಶೀಘ್ರವೇ ಹೊಸ ವ್ಯವಸ್ಥೆ ಜಾರಿಗೆ ತರಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಯಲ್ಲಿನ ಗುಂಡಿಯ ಕಾರಣಕ್ಕಾಗಿಯೇ ಹಲವು ಜಬ ವಾಹನ ಸವಾರರು ಸಾವನ್ನಪ್ಪಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಶಿಕ್ಷಕಿ ಶರ್ಮಿಳಾ ಅವರು ರಸ್ತೆ ಗುಂಡಿಯಿಂದಾಗಿ ಬೈಕ್ನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದರು. ಈ ಬಗ್ಗೆ ಎಎಪಿ ಪಕ್ಷ ಪ್ರತಿಭಟನೆ ಕೈಗೊಂಡು ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.