ಕಾಲೇಜು ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ಗಲಾಟೆ ರಾಜ್ಯದಾದ್ಯಂತ ತೀವ್ರ ಸಂಘರ್ಷಕ್ಕೆ ಎಡೆಮಾಡಿದೆ. ಉಡುಪಿಯಿಂದ ಆರಂಭವಾದ ಹಿಜಾಬ್ ಬಿಕ್ಕಟ್ಟು ಇದೀಗ ಬಹುತೇಕ ರಾಜ್ಯದ ಎಲ್ಲಾ ಕಾಲೇಜುಗಳಿಗೂ ಮುಟ್ಟಿದೆ.
ಇಂದು ಶಿವಮೊಗ್ಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದಿದೆ. ಶಿವಮೊಗ್ಗದ ಬಾಪೂಜಿನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಹೊರಭಾಗದಲ್ಲಿ ಪರಸ್ಪರ ಕಲ್ಲುತೂರಾಟ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು 144 ಸೆಕ್ಷನ್ ಅಡಿಯಲ್ಲಿ 2 ದಿನ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಶಿವಮೊಗ್ಗದ ಬಹುತೇಕ ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲು ವಿವಾದ ಭುಗಿಲೆದಿದೆ. ಸಹ್ಯಾದ್ರಿ ಕಾಲೇಜ್, ಸರಕಾರಿ ಪದವಿ ಕಾಲೇಜ್ ಹಾಗು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರಕಾರಿ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ್ದಾರೆ. ನ್ಯಾಷನಲ್ ಕಾಲೇಜು ಆವರಣದ ಎಚ್ ಎಸ್ ರುದ್ರಪ್ಪ ಕಾಲೇಜು ಬಳಿಯೂ ಕಲ್ಲುತೂರಾಟ ನಡೆಸಲಾಗಿದೆ. ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ವಿದ್ಯಾರ್ಥಿನಿಯರು ನಮಗೆ ನ್ಯಾಯಬೇಕು ಎಂದು ಮೆರವಣಿಗೆ ಹೊರಟರು. ರಸ್ತೆಯ ಇನ್ನೂಂದು ಕಡೆ ಕೇಸರಿ ಬಾವುಟ ಹಿಡಿದ ವಿದ್ಯಾರ್ಥಿಗಳು ಅದೇ ರಸ್ತೆಗೆ ಬಂದರು. ಈ ವೇಳೆ ಪೊಲೀಸರು ಎರಡು ಕಡೆಯವರನ್ನು ಬೇರೆ ಬೇರೆ ರಸ್ತೆಯ ಕಡೆ ತಿರುಗಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ ಲಕ್ಷ್ಮೀಪ್ರಸಾದ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.