ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸಲು ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಶನಿವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಹಿಜಾಬ್–ಕೇಸರಿ ಶಾಲು ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಿಖಿಲ್ ಉಪಾಧ್ಯಾಯ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದಾರೆ.
ಸಮಾನತೆ, ಭ್ರಾತೃತ್ವ ಹಾಗೂ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸುವುದು ಅಗತ್ಯ ಎಂದು ವಕೀಲರಾದ ಅಶ್ವಿನಿ ಉಪಾಧ್ಯಾಯ ಹಾಗೂ ಅಶ್ವನಿ ದುಬೆ ಅವರ ಮೂಲಕ ನಿಖಿಲ್ ಉಪಾಧ್ಯಾಯ ಅವರು ಸಲ್ಲಿಸಿರುವ ಪಿಐಎಲ್ ನಲ್ಲಿ ಹೇಳಲಾಗಿದೆ.
ಸೋಮವಾರ (ಫೆ.14) ದಂದು ಈ ಅರ್ಜಿ ವಿಚಾರಣೆ ನಡೆಯಲಿದೆ. ಅಂದೇ, ಬೆಂಗಳೂರಿನ ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಹಿಜಾಬ್ ವಿವಾದದ ಬಗ್ಗೆ ವಿಚಾರಣೆ ನಡೆಯಲಿದೆ.