ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸುವ ವಿವಾದದ ಬಗ್ಗೆ ಮಾತಾಡುವ ವೇಳೆ ಬಿಜೆಪಿ ಎಂಎಲ್ಸಿ ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿ ಟಿವಿ9 ಕನ್ನಡದಲ್ಲಿ ಚರ್ಚೆಯ ವೇಳೆ ಜೈನ ಧರ್ಮದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
`ನಾನು ಹೇಳ್ತೇನೆ, ಇವತ್ತು ಹಿಜಬ್ ಧರಿಸಿಕೊಂಡು ಪೂರ್ತಿ ಮುಖ ಮುಚ್ಚಿಕೊಂಡು, ತಲೆಕೂದಲು ಮುಚ್ಚಿಕೊಂಡು ಬರ್ತೀವಿ. ಜೈನ ಧರ್ಮದಲ್ಲಿ ಏನಿದೆ…? ಅದರೊಳಗೆ ಶ್ವೇತಾಂಬರರು, ದಿಗಂಬರರು ಅಂತ ಇದೆ. ಶ್ವೇತಾಂಬರರು ನಾವು ಬಿಳಿವಸ್ತ್ರವನ್ನು ಧರಿಸಿಕೊಂಡು ಬರ್ತೇವೆ, ದಿಗಂಬರರು ನಾವು ಹಾಗೇನೆ ಬರ್ತೀವಿ ಅಂತ ಹೇಳಿದ್ರೆ ಶಾಲಾ-ಕಾಲೇಜುಗಳ ಪರಿಸ್ಥಿತಿ ಏನಾಗಬಹುದು..?’
ಎಂದು ಟಿವಿ9 ಚರ್ಚೆಯ ವೇಳೆ ಬಿಜೆಪಿ ಪಕ್ಷದ ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ಆದರೆ ಬಿಜೆಪಿ ಎಂಎಲ್ಸಿಯ ಈ ಅಭಿಪ್ರಾಯಕ್ಕೆ ಟಿವಿ9 ನಿರೂಪಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
`ನೀವು ಮೇಲ್ಮನೆಯ ಸದಸ್ಯರು. ಒಂದು ವ್ಯಾಖ್ಯಾನವನ್ನು ಇನ್ನೆಲ್ಲಿಗೋ ತೆಗೆದುಕೊಂಡು ಹೋಗ್ತಿದ್ದೀರಿ. ದಿಗಂಬರರು, ಶ್ವೇತಾಂಬರರು ಯಾವ ಸ್ವರೂಪದಲ್ಲಿ ಇರುತ್ತಾರೆ ಎಂಬ ಬಗ್ಗೆ ಇಡೀ ಸಮಾಜಕ್ಕೆ ಗೊತ್ತಿದೆ’
ಎಂದು ಟಿವಿ9 ನಿರೂಪಕರು ಎಂಎಲ್ಸಿ ರವಿಕುಮಾರ್ ಅವರಿಗೆ ಎಚ್ಚರಿಸಿ ಕಿವಿಮಾತು ಹೇಳುತ್ತಾರೆ.
ಈಗಾಗಲೇ ಜೈನ ಧರ್ಮದ ಬಗ್ಗೆ ನಿಂದನೆ ಮಾಡಿದ ಆರೋಪದಡಿ ನ್ಯೂ ಕಾಂಗ್ರೆಸ್ (ಕಾಂಗ್ರೆಸ್ ಅಲ್ಲ) ಮುಖಂಡ ಅಯೂಬ್ ಖಾನ್ ವಿರುದ್ಧ ಜೈನರು ನೀಡಿದ ದೂರು ಆಧರಿಸಿ, ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆ ಚರ್ಚೆಯ ವೀಡಿಯೋದ ಲಿಂಕ್ ಇಲ್ಲಿದೆ. 56ನೇ ನಿಮಿಷದಿಂದ 57 ನಿಮಿಷದ 38 ಸೆಕೆಂಡ್ವರೆಗೆ ಎಂಎಲ್ಸಿ ರವಿಕುಮಾರ್ ಜೈನಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವ ತುಣುಕಿದೆ.