ಆನ್ಲೈನ್ ಗೇಮ್ಗಳು ಸೇರಿದಂತೆ ಬೆಟ್ಟಿಂಗ್ ಹಾಗೂ ಆನ್ ಲೈನ್ ಜೂಜು ನಿಷೇಧಿಸಿ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.
ರಾಜ್ಯ ಸರ್ಕಾರದ ತಿದ್ದುಪಡಿಯನ್ನು ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಮತ್ತು ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಈ ತಿದ್ದುಪಡಿ ಸಂವಿಧಾನಬಾಹಿರವೆಂದು ಹೇಳಿರುವ ಹೈಕೋರ್ಟ್, ಸರ್ಕಾರ ನಿಯಮಾನುಸಾರ ಹೊಸ ಕಾಯಿದೆ ಮಾಡಬಹುದೆಂದು ಹೇಳಿದೆ. ರಾಜ್ಯ ಸದ್ಯ ಆನ್ ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ಅವುಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಆಟದ ಫಲಿತಾಂಶದ ಬಗ್ಗೆ ತಿಳಿಯದಿರುವಾಗ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಆಯ್ಕೆಯೋ ಅಥವಾ ಕೌಶಲವೋ ಅದು ಬಾಜಿಗೆ ಸಮನಾಗಿರುತ್ತದೆ ಎಂದು ವಾದಿಸಿದ್ದರು.
ಕುದುರೆ ಓಟ ಮತ್ತು ಲಾಟರಿ ಹೊರತುಪಡಿಸಿ ಇತರೆ ಯಾವುದೇ ಆಟಕ್ಕೆ ಹಣವನ್ನು ಪಣವಾಗಿ ಕಟ್ಟುವ ಆನ್ಲೈನ್ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ನಿಷೇಧಿಸಲಾಗಿದ್ದು, ಜಾಮೀನು ರಹಿತ ಅಪರಾಧ ಎಂದು ರಾಜ್ಯ ಸರ್ಕಾರ ಈ ಹಿಂದೆ ಕಾಯ್ದೆ ಜಾರಿಗೆ ತಂದಿತ್ತು.