ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಷ್ಯಾ ವಿರುದ್ಧದ 2ನೇ ಮತದಾನದಿಂದಲೂ ಭಾರತ ದೂರ ಉಳಿಯುವ ಮೂಲಕ ಸೂಕ್ಷ್ನ ಹಜ್ಜೆ ಹಾಕಿದೆ.
ಕೆಲವೇ ದಿನಗಳ ಹಿಂದೆ ರಷ್ಯಾ ತನ್ನ ಸೇನೆಯನ್ನು ಉಕ್ರೇನ್ನಿಂದ ಹಿಂತೆಗೆದುಕೊಳ್ಳಬೇಕೆಂಬ ವಿಶ್ವಸಂಸ್ಥೆಯ ನಿರ್ಣಯಕ್ಕೆ ಮತದಾನ ಮಾಡದೇ ದೂರ ಉಳಿದಿತ್ತು. ಇದೀಗ, ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರಗೊಳ್ಳುತ್ತಲೇ, ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ಅಧಿವೇಶನ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕ್ರಮ ಕೈಗೊಂಡಿದೆ. ಈ ನಿರ್ಣಯಕ್ಕೂ ಮತದಾನ ಮಾಡದೇ ಭಾರತ ದೂರ ಉಳಿದಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ 15 ರಾಷ್ಟ್ರಗಳಲ್ಲಿ 11 ರಾಷ್ಟ್ರಗಳು ಪರವಾಗಿ ಮತಾದನ ಮಾಡಿವೆ. ಚೀನಾ, ಭಾರತ ಹಾಗೂ ಯುಎಇ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದು, ರಷ್ಯಾ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದೆ. ಅಧಿವೇಶನ ನಡೆಸುವ ಪರವಾಗಿ ಹೆಚ್ಚು ಮತಗಳು ಬಂದಿದ್ದರಿಂದ ಇಂದು ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ವಿಶ್ವಸಂಸ್ಥೆಯ ತುರ್ತು ಅಧಿವೇಶನ ನಡೆಯಲಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿಯವರು, ಉಕ್ರೇನ್ ಹಾಗೂ ರಷ್ಯಾದ ನಡುವಿನ ಪರಿಸ್ಥಿತಿ ದಿನೇ ದಿನೇ ಹದೆಗೆಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಂತಿ ಮಾತುಕತೆಯ ದಾರಿ ತುಳಿಯದೆ ಇದಕ್ಕೆ ಪರಿಹಾರವಿಲ್ಲ. ಈ ನಿಟ್ಟಿನಲ್ಲಿ ಕೀವ್ ಹಾಗೂ ಮಾಸ್ಕೋದ ನಡುವಿನ ಮಾತುಕತೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ವಿಶ್ವ ಸಂಸ್ಥೆಯ ತುರ್ತು ಅಧಿವೇಶನವನ್ನು 1950 ರಿಂದೀಚೆಗೆ 11 ಭಾರಿ ನಡೆಸಲಾಗಿದೆ.