ಉಕ್ರೇನ್ ನಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುತ್ತಿರುವ ತಮ್ಮ ಹಲವು ಸ್ನೇಹಿತರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿ ಸಿಲುಕಿಹಾಕಿಕೊಂಡಿರುವ ವಿದ್ಯಾರ್ಥಿಗಳ ಅಳಲು ತೋಡಿಕೊಳ್ಳುತ್ತಿದ್ದು ಅವರನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲವಂತೆ. ಇನ್ನು ಅಲ್ಲಿ ಎಂಬಿಬಿಎಸ್ ಓದಲು ಹೋಗಿರುವ ಮಕ್ಕಳ ಅನೇಕ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಡೊನೆಸ್ಟ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಶಿತಾ ಭಾರದ್ವಾಜ್ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಸೋದರಿ ದೆಹಲಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಶಿವಾಂಗಿ, ಆಶಿತಾರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆಕೆಯೂ ಕುಟುಂಬಸ್ಥರನ್ನು ಸಂಪರ್ಕಿಸುತ್ತಿಲ್ಲ. ಆಶಿತಾ ಪೋಲೆಂಡ್ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಳು, ಆದರೆ ನಮಗೆ ಸಂಪರ್ಕಿಸಲು, ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಆಶಿತಾ.
ಖಾರ್ವಿಕ್ ರಾಷ್ಟ್ರೀಯ ಮೆಡಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಹಿಲ್ ಲತ್ ವಾಲ್, ತಮ್ಮ ವಿಶ್ವವಿದ್ಯಾಲಯದಿಂದ ಹಲವು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು ಇವರ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಸಿಗುತ್ತಿದ್ದಂತೆ ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿ ನೀಡುತ್ತಾರೆ ಎನ್ನುತ್ತಾರೆ.
ಹರ್ಯಾಣದ ಎಂಬಿಬಿಎಸ್ ವಿದ್ಯಾರ್ಥಿ ಪ್ರೇಮ್ ಸಿಂಗ್(ಹೆಸರು ಬದಲಿಸಲಾಗಿದೆ)ಇದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು, ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು ಅವರ ಫೋನ್ ಕೂಡ ಸಿಗುತ್ತಿಲ್ಲ. ಅವರನ್ನು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಖಾರ್ವಿಕ್ ನಲ್ಲಿರುವ ಸಾಹಿಲ್ ಹೇಳುತ್ತಾರೆ.
ವಿನ್ನಿಟ್ಸಿಯಾದ ರಾಷ್ಟ್ರೀಯ ಪಿರೊಗೊವ್ ಮೆಡಿಕಲ್ ಯೂನಿವರ್ಸಿಟಿಯ ಮತ್ತೊಬ್ಬ ವಿದ್ಯಾರ್ಥಿ ಅಬ್ದುಲ್(ಹೆಸರು ಬದಲಾವಣೆ) ಕೂಡ ನಾಪತ್ತೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ವಿವರ ಹಾಕಿದ್ದು ಅವರ ಪತ್ತೆಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಸಹಪಾಠಿ ಹೇಳುತ್ತಾರೆ. ಪೋಲೆಂಡ್ ಗಡಿಯತ್ತ ಅಬ್ದುಲ್ ಹೊರಟಿದ್ದರು.
ಭಾರತಕ್ಕೆ ಹಿಂತಿರುಗಲು ಪೋಲೆಂಡ್ ಗಡಿಭಾಗದಲ್ಲಿ ಕಾಯುತ್ತಿರುವ ಸಂದೀಪ್ ಕೌರ್, ಉಕ್ರೇನ್-ಪೋಲೆಂಡ್ ಗಡಿಭಾಗಕ್ಕೆ ಹೋಗಿರುವ ಹಲವು ವಿದ್ಯಾರ್ಥಿಗಳ ಫೋನ್ ಗಳು ಸಂಪರ್ಕ ಕಳೆದುಕೊಂಡಿದ್ದು ಈ ವಿದ್ಯಾರ್ಥಿಗಳ ಫೋನ್ ಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತೆಗೆದಿಟ್ಟುಕೊಂಡಿದ್ದಾರೆ ಎನ್ನುತ್ತಾರೆ.
ಇಷ್ಟು ಜನ ಮಾತ್ರವಲ್ಲದೇ, ಮತ್ತಷ್ಟು ಜನ ಪಾಲಕರು ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗದೇ ಆತಂಕದಲ್ಲಿದ್ದಾರೆ.