2020-21 ರ ಆಯವ್ಯಯದಲ್ಲಿ ಕ್ರೀಡೆ, ಶಿಕ್ಷಣ ಮತ್ತು ಕಲೆ ಸಂಸ್ಕೃತಿಗಳ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರಕಾರವು 29 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿರಿಸಿತ್ತು. ಇದರಲ್ಲಿ ವಾಸ್ತವವಾಗಿ ಶಿಕ್ಷಣಕ್ಕೇ ಎಷ್ಟು ಖರ್ಚಾಗಿದೆ ಎಂಬುದು ಸ್ಪಷ್ಟವಿಲ್ಲ. ಈ ವರ್ಷದ ಆಯವ್ಯಯದಲ್ಲಿ 31980 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆಯಾದರೂ ಇದರ ಅಡಿಯಲ್ಲಿ ಚಾಮರಾಜನಗರ, ಬೀದರ್, ಹಾಸನ, ಹಾವೇರಿ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ, ಏಳು ಇಂಜೀನಿಯರಿಂಗ್ ಕಾಲೇಜುಗಳ ಉನ್ನತೀಕರಣ ಮೊದಲಾದ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಹೀಗಾಗಿ ಹಣ ಆ ಕಡೆಗೆ ಹರಿಯುವುದು ಅನಿವಾರ್ಯ.
ಹೊಸ ಯೋಜನೆಗಳು ರಾಜಕಾರಣಿಗಳಿಗೆ ತಂದು ಕೊಡುವ ʼಅನುಕೂಲʼಗಳನ್ನು ಹಳೆಯ ಯೋಜನೆಗಳು ತಂದುಕೊಡುವುದಿಲ್ಲವಾದ್ದರಿಂದ ಯಾರೂ ಆ ಕಡೆಗೆ ಯೋಚಿಸುವುದಿಲ್ಲ. ಉದಾಹರಣೆಗೆ ಹಣದ ಕೊರೆತೆಯೊಂದ ನರಳುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಯಾವುದೇ ಸ್ಪಷ್ಟ ಮಾತುಗಳನ್ನು ಹೇಳಲಾಗಿಲ್ಲ. ನಿರುದ್ಯೋಗದಿಂದ ಬಳಲುತ್ತಿರುವ ಇವತ್ತಿನ ವಿದ್ಯಾವಂತರಿಗೆ ಅಗತ್ಯವಾಗಿದ್ದ ಉದ್ಯೋಗ ಹುಟ್ಟಿಸುವ ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳನ್ನೂ ಘೋಷಿಸಲಾಗಿಲ್ಲ. ಘೋಷಿಸಲಾದ ಯೋಜನೆಗಳು ಸೃಷ್ಟಿಸಬಹುದಾದ ಉದ್ಯೋಗಗಳು ಸಮಸ್ಯೆಯನ್ನು ನಿವಾರಿಸಲಾರವು.
ಈ ನಡುವೆ ಶಾಲೆಗಳ ಉನ್ನತೀಕರಣ, ಮಾದರಿ ಶಾಲೆಗಳ ನಿರ್ಮಾಣ, ಪೀಠೋಪಕರಣಗಳ ನಿರ್ಮಿತಿ, 15000 ಹುದ್ದೆಗಳ ಭರ್ತಿ, 27000 ಅತಿಥಿ ಅಧ್ಯಾಪಕರ ನೇಮಕಾತಿ, ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ ಇತ್ಯಾದಿಗಳನ್ನು ಮಾಡುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಈ ಎಲ್ಲಾ ಕೆಲಸಗಳು ಸಮರ್ಪಕವಾಗಿ ನಡೆಯಬೇಕಾದರೆ ಏನಿಲ್ಲವೆಂದರೂ ಒಂದು ಲಕ್ಷ ಕೋಟಿ ( ಜಿಡಿಪಿಯ ಆರು ಶೇಕಡಾ ಹಣ) ರೂಪಾಯಿಗಳು ಬೇಕು. ಈಗ ಇಟ್ಟಿರುವುದು ಅದರ ಮೂರನೇ ಒಂದರಷ್ಟು. ಹೀಗಾಗಿ ನೂತನ ಶಿಕ್ಷಣ ನೀತಿಯ ಪರಿಣಾಮಕಾರೀ ಅನುಷ್ಠಾನ ಸಾಧ್ಯವಿಲ್ಲ.