ಬೇರೆ ಭಾಷೆಗಳಿಗಿಂತ ಕನ್ನಡ ಭಾಷಾ ಶಿಕ್ಷಕರಿಗೆ ಕಡಿಮೆ ಸಂಬಳ ನೀಡುವ ಮೂಲಕ ಕೇಂದ್ರೀಯ ವಿದ್ಯಾಲಯವೊಂದು ಕನ್ನಡ ಭಾಷೆಗೆ ತಾರತಮ್ಯ ಎಸಗಿದೆ.
ಬೆಳಗಾವಿಯಲ್ಲಿರುವ ಕೇಂದ್ರೀಯ ವಿದ್ಯಾಲಯ ಶಾಲೆಯು ಪತ್ರಿಕೆಯೊಂದರ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಯ ಜಾಹೀರಾತನ್ನು ಪ್ರಕಟಿಸಿದೆ. ಈ ಹುದ್ದೆಗಳ ಸಂದರ್ಶನ ಇದೇ ಮಾರ್ಚ್ 14, 15 ಹಾಗೂ 16 ರಂದು ನಡೆಯಲಿದೆ.
ಕೇಂದ್ರೀಯ ವಿದ್ಯಾಲಯ ಹೊರಿಡಿಸಿರುವ ಈ ಜಾಹೀರಾತಿನಲ್ಲಿ ಇಂಗ್ಲೀಷ್, ಹಿಂದಿ ಹಾಗೂ ಕನ್ನಡ ಭಾಷಾ ಶಿಕ್ಷಕರ ನಡುವೆ ವೇತನ ತಾರತಮ್ಯ ಮಾಡಿದೆ. ಇಂಗ್ಲೀಷ್ ಹಾಗೂ ಹಿಂದಿ ಭಾಷಾ ಶಿಕ್ಷಕರಿಗೆ 26,250 ರಿಂದ 27,500 ರೂ ಗಳ ವರೆಗೆ ನಿಗದಿ ಪಡಿಸಿದೆ. ಆದರೆ, ಕನ್ನಡ ಭಾಷಾ ಶಿಕ್ಷಕರಿಗೆ ಕೇವಲ 18,750 ರೂ.ಗಳನ್ನು ನಿಗದಿ ಪಡಿಸಿದೆ.
ಕೇಂದ್ರ ಸರ್ಕಾರದ ಭಾಷೆಯ ಮೇಲಿನ ವೇತನ ತಾರತಮ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಜನ ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸಿದ್ದರು. ಇದೀಗ, ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಈ ವೇತನ ತಾರತಮ್ಯ ವಿರುದ್ಧ ಧ್ವನಿಯಾಗಿದ್ದಾರೆ.
ಕೇಂದ್ರೀಯ ವಿದ್ಯಾಲಯಗಳ ಅಧ್ಯಕ್ಷರಾಗಿರುವ ರಮೇಶ್ ಪೋಕ್ರಿಯಾಲ್ ಅವರಿಗೆ ಪತ್ರ ಬರೆದಿರುವ ಜಿ.ಸಿ.ಚಂದ್ರಶೇಖರ್ ಅವರು, ಕನ್ನಡಿಗರನ್ನು ದ್ವಿತಿಯ ಭಾಷಿಗರನ್ನಾಗಿ ನೋಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶೀಘ್ರವೇ ಈ ವೇಥನ ತಾರತಮ್ಯ ಸಮಸ್ಯೆಯನ್ನು ಬಗೆಹರಿಸುವಂತ ಕೇಳಿಕೊಂಡಿದ್ದಾರೆ.
ನಮ್ಮ ಬೆಳಗಾವಿಯಲ್ಲಿ ಇರುವ ಕೇಂದ್ರೀಯ ವಿದ್ಯಾಲಯ ಶಾಲೆಯ ಪತ್ರಿಕೆಯ ಮೂಲಕ ಕರೆದಿದ್ದ ಅಧ್ಯಾಪಕರ ನೇಮಕ ಅಧಿಸೂಚನೆಯಲ್ಲಿ ಕನ್ನಡ ಭಾಷೆಯ ಅಧ್ಯಾಪಕರಿಗೂ ಹಾಗೂ ಇತರ ಭಾಷೆಯ ಅಧ್ಯಾಪಕರಿಗೂ ಕೊಡುವ ಸಂಬಳದಲ್ಲಿ ತಾರತಮ್ಯವನ್ನು ಕೇಂದ್ರೀಯ ಮಂತ್ರಿಗಳ ಗಮನಕ್ಕೆ ತಂದಿರುವ!
ಆದಷ್ಟು ಶೀಘ್ರವಾಗಿ ಪರಿಹರಿಸುತ್ತಾರೆ ಎಂದು ನಂಬಿದ್ದೇನೆ@CMofKarnataka pic.twitter.com/3R5HT57XeG— GC ChandraShekhar (@GCC_MP) March 12, 2022