ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಭಾನುವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಿಗದಿ ಮಾಡಲಾಗಿದೆ.
ಗುರುವಾರ ಪ್ರಕಟವಾದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ತನ್ನ ನಿಯಂತ್ರಣದಲ್ಲಿದ್ದ ಪಂಜಾಬ್ ಅನ್ನು ಕಳೆದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ್ದು, ಉಳಿದ ಮೂರು ರಾಜ್ಯಗಳಾದ ಉತ್ತರಾಖಂಡ್, ಗೋವಾ ಮತ್ತು ಮಣಿಪುರದಲ್ಲಿ ಅಧಿಕಾರಕ್ಕೆ ಮರಳು ಕನಸು ಭಗ್ನಗೊಂಡಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದ ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ ಕೇವಲ 2 ರಲ್ಲಿ ಕಾಂಗ್ರೆಸ್ ಗೆದಿದ್ದು, ಪಕ್ಷ ಕೇವಲ ಶೇಕಡಾ 2.4 ರಷ್ಟು ಮತ ಗಳಿಸಿದೆ. ಚುನಾವಣೆಯಲ್ಲಿ ಕಳಪೆ ಸಾಧನೆ ಪಕ್ಷದೊಳಗೆ ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗಬೇಕಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೇರಿದಂತೆ ಮತ್ತಿತರು ಆಗ್ರಹಿಸಿದ್ದಾರೆ.
ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕೋರಿ ಎರಡು ವರ್ಷದ ಹಿಂದೆಯೇ ಸೋನಿಯಾ ಗಾಂಧಿ ಅವರಿಗೆ ಜಿ-23 ಪತ್ರ ಬರೆದಿದ್ದರು. ಇದೀಗ ಆ ಪತ್ರಕ್ಕೆ ಮತ್ತೆ ಪುಷ್ಠಿ ದೊರೆತಂದೆ ಆಗಿದೆ. ಈ ಮಧ್ಯೆ ಕಾಂಗ್ರೆಸ್ನ ಆಂತರಿಕ ಚುನಾವಣೆಯನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ನಾಳೆ ನಡೆಯುವ ಸಭೆಯಲ್ಲಿಯೂ ಸೆಪ್ಟಂಬರ್ನಲ್ಲಿ ನಿಗದಿಯಾಗಿದ್ದ ಆಂತರಿಕ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗಾಂಧಿ ಕುಟುಂಬಕ್ಕೆ ಆಪ್ತರಾದ ಮುಖಂಡರು ಅವರ ನಾಯಕತ್ವವನ್ನು ಬೆಂಬಲಿಸಿದ್ದಾರೆ. ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಉಳಿಯಲು ಅಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.