2024ರ ಲೋಕಸಭಾ ಫಲಿತಾಂಶ ನಿರ್ಧಾರ ಆಯ್ತಾ..?
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತಾ..? ಇದು 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಆಗುತ್ತಾ ಅಥವಾ ಉಳಿದ ಚುನಾವಣೆಗಳಂತೆ ಇದೂ ಒಂದು ಚುನಾವಣಾ ಫಲಿತಾಂಶವಷ್ಟೇನಾ..?
ಉತ್ತರಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್ನಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಬಂದ ದಿನ ನವದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯೋತ್ಸವ ಭಾಷಣದಲ್ಲಿ ಆಡಿದ ಮಾತು ಮಹತ್ವದ್ದು,
`2017ರ ಉತ್ತರಪ್ರದೇಶ ಫಲಿತಾಂಶದಿಂದ ಈಗಾಗಲೇ ನಿರ್ಧಾರ ಆಗಿದೆ ಎಂದು 2019ರ ಪಕ್ಷದ ಲೋಕಸಭಾ ಚುನಾವಣಾ ಗೆಲುವಿನ ಬಗ್ಗೆ ಅಷ್ಟೇನೂ ಯೋಚಿಸದ ರಾಜಕೀಯ ಪಂಡಿತರು, 2022ರ ಉತ್ತರಪ್ರದೇಶ ಫಲಿತಾಂಶ 2024ರ ಲೋಕಸಭಾ ಫಲಿತಾಂಶವನ್ನು ತೀರ್ಮಾನಿಸಿ ಆಗಿದೆ ಎಂದು ಹೇಳುವ ಧೈರ್ಯ ತೋರುವರೇ..?’
ಪ್ರಧಾನಿ ಮೋದಿ ಅವರು ಆಡಿದ ಈ ಭವಿಷ್ಯವಾಣಿಗೆ ಮರು ದಿನವೇ 2014ರಲ್ಲಿ ಮೊದಲ ಬಾರಿಗೆ ಪ್ರಚಂಡ ಬಹುತಮದೊಂದಿಗೆ ನರೇಂದ್ರ ಮೋದಿ ಪ್ರಧಾನಿ ಆಗಲು ರಣತಂತ್ರಗಳನ್ನು ರೂಪಿಸಿದ್ದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಟ್ವೀಟ್ ಮಹತ್ವದ್ದು.
`2024ರಲ್ಲಿ ಭಾರತಕ್ಕಾಗಿ ಹೋರಾಟ ನಡೆಯಲಿದೆ ಮತ್ತು ಆಗ ನಿರ್ಧಾರ ಆಗಲಿದೆ ಮತ್ತು ಯಾವುದೇ ರಾಜ್ಯ ಚುನಾವಣೆಗಳಿಂದಲ್ಲ. ಸಾಹೇಬರಿಗೆ ಇದು ಗೊತ್ತಿದೆ. ಹೀಗಾಗಿ ರಾಜ್ಯಗಳ ಫಲಿತಾಂಶದ ಸುತ್ತ ವಿರೋಧ ಪಕ್ಷಗಳ ಮೇಲೆ ಮಾನಸಿಕ ಮೇಲುಗೈಯನ್ನು ಸ್ಥಾಪಿಸುವ ತಾತ್ಕಾಲಿಕ ಭಾವನೆಯನ್ನು ಸೃಷ್ಟಿಸುವ ಬುದ್ಧಿವಂತಿಕೆಯ ಪ್ರಯತ್ನ. ಈ ತಪ್ಪು ವಾದಕ್ಕೆ ಬಲಿಯಾಗಬೇಡಿ ಅಥವಾ ಅದರ ಭಾಗ ಆಗಬೇಡಿ’.
ಒಂದು ಕಾಲದ ಬಿಜೆಪಿ ಚುನಾವಣಾ ಸಲಹೆಗಾರರೇ ಪ್ರಧಾನಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದು ಪ್ರಮುಖವಾದದ್ದು.
ಪಂಚ ಫಲಿತಾಂಶ ಪರಿಣಾಮ ಏನಾಗಬಹುದು..?
ಈಗ ನಾವು ಐದು ರಾಜ್ಯಗಳಲ್ಲಿ ಪಕ್ಷಗಳು ಪಡೆದಿರುವ ವಿಧಾನಸಭಾ ಸೀಟುಗಳನ್ನು ಲೋಕಸಭಾ ಸೀಟುಗಳಿಗೆ ಪರಿವರ್ತಿಸಿದರೆ ಎಷ್ಟು ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರವೊಂದನ್ನು ಮಾಡೋಣ.
ಉತ್ತರಪ್ರದೇಶದಲ್ಲಿ ಎಸ್ಪಿ ತನ್ನ ಸೀಟುಗಳ ಸಂಖ್ಯೆಯನ್ನು ಎರಡೂವರೆ ಪಟ್ಟು ಏರಿಸಿಕೊಂಡಿದೆ. 49 ಸೀಟುಗಳಿಂದ 117 ಸೀಟುಗಳಿಗೆ. ಬಿಜೆಪಿ 246 ವಿಧಾನಸಭಾ ಸೀಟುಗಳನ್ನು ಗೆದ್ದಿದೆ. 2017ಕ್ಕೆ ಹೋಲಿಸಿದ್ರೆ 76 ಸೀಟುಗಳು ಖೋತಾ ಆಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಒಟ್ಟು 80 ಲೋಕಸಭಾ ಸೀಟುಗಳ ಪೈಕಿ 64 ಸೀಟುಗಳನ್ನು ಗೆದ್ದುಕೊಂಡಿದ್ದ ಬಿಜೆಪಿ 2024ರ ವೇಳೆಗೆ 60 ಸೀಟುಗಳನ್ನು ಗೆಲ್ಲಬಹುದು. ಬಿಜೆಪಿ ಮಿತ್ರಪಕ್ಷ ಅಪ್ನಾದಳ್ ಬಳಿ ಇರುವ 1 ಸೀಟು ಖೋತಾ ಆಗಬಹುದು. 2014ರಲ್ಲಿ ಬಿಜೆಪಿ 71 ಸೀಟುಗಳನ್ನು ಗೆದ್ದಿತ್ತು.
ಇನ್ನು ಎಸ್ಪಿ ಗಳಿಸಿರುವ ವಿಧಾನಸಭಾ ಸೀಟುಗಳನ್ನು ಲೋಕಸಭಾ ಸೀಟುಗಳಿಗೆ ಪರಿವರ್ತಿಸಿದರೆ 2024ರಲ್ಲಿ 20 ಸೀಟು ಗೆಲ್ಲಬಹುದು. 2019ರಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡ ಕಾರಣ ಬಿಎಸ್ಪಿ 10 ಸೀಟು, ಎಸ್ಪಿ 5 ಸೀಟು ಗೆದ್ದಿತ್ತು, ಕಾಂಗ್ರೆಸ್ 1 ಸೀಟು ಗೆದ್ದಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಕೇವಲ 1 ಸೀಟು ಗೆದ್ದಿದೆ.
ಇದೇ ಸೂತ್ರವನ್ನು ಪಂಜಾಬ್ಗೆ ಅಳವಡಿಸಿದರೆ 2024ರಲ್ಲಿ ಕಾಂಗ್ರೆಸ್ 2 ಸೀಟು ಗೆಲ್ಲಬಹುದು. ಅಂದರೆ ಕಾಂಗ್ರೆಸ್ಗೆ 6 ಸೀಟು ನಷ್ಟ ಆಗಲಿದೆ. ಆಮ್ ಆದ್ಮಿ ಪಾರ್ಟಿಗೆ 11 ಸೀಟು ಸಿಗಲಿದೆ, 10 ಸೀಟು ಏರಿಕೆ ಆಗಲಿದೆ. ತಲಾ ಎರಡೆರಡು ಲೋಕಸಭಾ ಸೀಟು ಗೆದ್ದಿದ್ದ ಅಕಾಲಿದಳವಾಗಲೀ ಬಿಜೆಪಿಯಾಗಲೀ ಒಂದೂ ಸೀಟು ಗೆಲ್ಲದೇ ಹೋಗಬಹುದು.
ಉತ್ತರಾಖಂಡ್ನಲ್ಲಿ 2024ರಲ್ಲೂ ಐದೂ ಲೋಕಸಭಾ ಸೀಟುಗಳನ್ನು ಮತ್ತು ಗೋವಾದಲ್ಲಿ ಎರಡೂ ಸೀಟುಗಳನ್ನು ಬಿಜೆಪಿ ಗೆಲ್ಲಬಹುದು.
ಬದಲಾದ ರಾಜ್ಯಗಳ ರಾಜಕಾರಣ..?
ಆದರೆ ಇಲ್ಲೊಂದು ಅಂಶವನ್ನು ಗಮನಿಸಬೇಕು. 2019ರ ಲೋಕಸಭಾ ಚುನಾವಣೆಯ ಬಳಿಕ ಹಲವು ರಾಜ್ಯಗಳಲ್ಲಿ ರಾಜಕಾರಣ ಬದಲಾಗಿದೆ. ಉದಾಹರಣೆಗೆ 48 ಲೋಕಸಭಾ ಕ್ಷೇತ್ರ ಹೊಂದಿರುವ ಮಹಾರಾಷ್ಟ್ರ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಹೊಂದಿದ್ದವು. ಆಗ ಬಿಜೆಪಿ 23 ಮತ್ತು ಶಿವಸೇನೆ 18 ಸೀಟುಗಳನ್ನು ಗೆದ್ದಿತ್ತು, ಎನ್ಸಿಪಿ 4 ಮತ್ತು ಕಾಂಗ್ರೆಸ್ 1 ಸೀಟು ಗೆದ್ದಿತ್ತು. ಆದ್ರೆ ವಿಧಾನಸಭಾ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮುರಿದುಬಿದ್ದಿದೆ, ಈಗ ಎನ್ಸಿಪಿ+ಕಾಂಗ್ರೆಸ್+ಶಿವಸೇನೆ ನೇತೃತ್ವದ ಮಹಾಮೈತ್ರಿಕೂಟವಿದೆ.
ಇನ್ನು ಪಶ್ಚಿಮ ಬಂಗಾಳದ ಸರದಿ. ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ 2 ಲೋಕಸಭಾ ಸೀಟು ಗೆದ್ದಿದ್ದ ಬಿಜೆಪಿ 2019ರಲ್ಲಿ 18 ಸೀಟು ಗೆದ್ದಿತ್ತು, 16 ಸೀಟುಗಳ ಏರಿಕೆ. ಆದ್ರೆ ಕಳೆದ ವರ್ಷ ನಡೆದ ವಿಧಾನಸಭೆಯಲ್ಲಿ ಮತ್ತೆ ದೀದಿ ಮಮತಾ ಬ್ಯಾನರ್ಜಿ ಪಕ್ಷ ಮತ್ತೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಗೆ ವಲಸೆ ಹೋಗಿದ್ದ ಹಲವು ಶಾಸಕರು, ನಾಯಕರು ಮತ್ತೆ ಟಿಎಂಸಿಗೆ ಮರಳಿದ್ದಾರೆ, ಇನ್ನೂ ಹಲವರು ಮರಳಲು ಸರತಿಯಲ್ಲಿ ನಿಂತಿದ್ದಾರೆ. ಸಂಸದ ಬಾಬುಲ್ ಸುಪ್ರಿಯೋ ಬಿಜೆಪಿ ಬಿಟ್ಟು ಟಿಎಂಸಿ ಸೇರಿದ್ದಾರೆ.
ಬಿಹಾರದಲ್ಲಿ 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆಯಾದರೂ ಎರಡೂ ಪಕ್ಷಗಳ ಶೇಕಡಾವಾರು ಮತಗಳಿಕೆ ಕುಸಿದಿದೆ ಮತ್ತು ಜೆಡಿಯುಗೆ ದೊಡ್ಡ ಪ್ರಮಾಣದಲ್ಲಿ ಸೀಟು ನಷ್ಟವಾಗಿದೆ.
ಇನ್ನು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿದೆ. ಜಾರ್ಖಂಡ್ನಲ್ಲಿ ಬಿಜೆಪಿ ಸೋಲಿಸಿ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆರಂಭದಲ್ಲಿ ಗೆದ್ದು ಆ ಬಳಿಕ ಆಪರೇಷನ್ ಕಮಲ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ.
ಇನ್ನು ಕರ್ನಾಟಕದಲ್ಲಿ 2014ರಲ್ಲಿ 17 ಸೀಟು ಗೆದ್ದಿದ್ದ ಬಿಜೆಪಿ 2019ರಲ್ಲಿ 28ರಲ್ಲಿ 25 ಸೀಟು ಗೆದ್ದಿತ್ತು. ಆದರೆ ಅದೇ ರೀತಿ ಫಲಿತಾಂಶ 2024ರಲ್ಲೂ ಬಿಜೆಪಿಗೆ ಬರುತ್ತಾ ಎನ್ನುವುದೇ ಕುತೂಹಲ.
ಒಂದಂಶವನ್ನು ಇಲ್ಲಿ ಹೇಳಲೇಬೇಕು. ಲೋಕಸಭಾ ಚುನಾವಣೆ ರಾಷ್ಟ್ರೀಯ ನಾಯಕತ್ವದಡಿ ನಡೆಯುವ ಮತದಾನ. ರಾಷ್ಟ್ರೀಯ ವಿಷಯಗಳೇ ಮುನ್ನೆಲೆಗೆ ಬರುತ್ತವೆ. ಆದರೆ ರಾಜ್ಯಗಳಲ್ಲಿನ ಮೈತ್ರಿ ಲೆಕ್ಕಾಚಾರವೂ ಪರಿಣಾಮ ಬಿದ್ದೇಬೀರುತ್ತೆ. ಆದರೆ ದೀದಿ ಮತ್ತು ಮಹಾರಾಷ್ಟ್ರದ ಶರದ್ಪವಾರ್ ಕೂಡಾ ಪ್ರಧಾನಿ ಗಾದಿಯ ಮೇಲೆ ಕಣ್ಣಿಟ್ಟವರು. ಕಾಂಗ್ರೆಸ್ನ್ನೇ ಪಕ್ಕಕ್ಕಿಟ್ಟು ರಾಷ್ಟ್ರೀಯ ಮೈತ್ರಿಕೂಟ ರಚಿಸಿಕೊಳ್ಳುವ ಯತ್ನಕ್ಕೆ ಶಿವಸೇನೆ ಆಕ್ಷೇಪಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಹೋಗುವಾಗ ಬಿಜೆಪಿಗೆ ಪರ್ಯಾಯವಾದ ಪಕ್ಷಗಳು ನಾಯಕತ್ವ ಮತ್ತು ರಾಷ್ಟ್ರೀಯ ಮೈತ್ರಿಕೂಟದ ಸ್ವರೂಪದ ಬಗ್ಗೆ ಸ್ಪಷ್ಟತೆ ಹೊಂದದೇ ಹೋದಲ್ಲಿ ದುಸ್ಸಾಹಸವಾದಿತು.
80 ಲೋಕಸಭಾ ಕ್ಷೇತ್ರ ಇದೆ ಎಂಬ ಮಾತ್ರಕ್ಕೆ ಉತ್ತರಪ್ರದೇಶದ ಫಲಿತಾಂಶವೇ ರಾಷ್ಟ್ರ ರಾಜಕಾರಣದ ದಿಕ್ಕು ದೆಸೆಯನ್ನು ನಿರ್ಧರಿಸುತ್ತದೆ ಎನ್ನುವುದು ಅತಿರೇಕವಾದಿತು. ಉಳಿದ ದೊಡ್ಡ ರಾಜ್ಯಗಳಲ್ಲಿನ ಫಲಿತಾಂಶಗಳೂ ಕೂಡಾ ಅನಿವಾರ್ಯ. ಹೀಗಾಗಿ ಉತ್ತರಪ್ರದೇಶ ವಿಧಾನಸಭಾ ಫಲಿತಾಂಶವೊಂದೇ 2024ರ ಫಲಿತಾಂಶವನ್ನು ನಿರ್ಧರಿಸಿದೆ ಎಂಬ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಮಾತುಗಳು ಸದ್ಯಕ್ಕೆ ಅತಿಶಯೋಕ್ತಿಗಳಷ್ಟೇ.