ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಶಿಕ್ಷಕಿ ಅವಮಾನಿಸಿದ್ದಕ್ಕಾಗಿ 101 ಬಾರಿ ಚೂರಿ ಇರಿದು ಕೊಲೆ ಮಾಡಿದ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.
ಬೆಲ್ಜಿಯಂನಲ್ಲಿ 37 ವರ್ಷದ ವ್ಯಕ್ತಿಯೊಬ್ಬ 7 ವರ್ಷದವನಾಗಿದ್ದಾಗ ತನ್ನ ಶಿಕ್ಷಕರು ತರಗತಿಯಲ್ಲಿ ಅವಮಾನಿಸಿದ್ದಕ್ಕೆ 30 ವರ್ಷಗಳ ನಂತರ ಚೂರಿಯಿಂದ ಇರಿದು ಸೇಡು ತೀರಿಸಿಕೊಂಡಿದ್ದಾನೆ. ಮಾರಿಯಾ ವೆಲಿರ್ಂಡೆನ್ ಕೊಲೆಯಾದ ಶಿಕ್ಷಕಿ.
ಗುಂಟರ್ ಉವೆಂಟ್ಸ್ ಹೆಸರಿನ ಆರೋಪಿಯು 1990 ರಲ್ಲಿ ಅಂದರೆ ಅವನು 7 ವರ್ಷದ ಬಾಲಕನಾಗಿದ್ದಾಗ ಅವನ ಬಗ್ಗೆ ಟೀಚರ್ ವರ್ಲಿನ್ಡೆನ್ ಮಾಡಿದ ಅವಹೇಳನಕಾರಿ ಕಾಮೆಂಟ್ ಮಾಡಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಗುಂಟರ್ 2020ರಲ್ಲಿ ಮನೆಯಲ್ಲಿ ಕೊಂದರೂ ಪೊಲೀಸರಿಗೆ ಸುಮಾರು ಎರಡು ವರ್ಷಗಳ ಕಾಲ ಪ್ರಕರಣವನ್ನು ಬೇಧಿಸುವುದು ಸಾಧ್ಯವಾಗಿರಲಿಲ್ಲ. ನೂರಾರು ಜನರ ವಿಚಾರಣೆ ನಡೆಸಿ ಡಿಎನ್ಎ ಪರೀಕ್ಷೆಗಳನ್ನು ನಡೆಸಿದ್ದರೂ ಹಂತಕನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ವರ್ಲಿನ್ಡೆನ್ರ ಪತಿ ಸಾಕ್ಷ್ಯ ಒದಗಿಸಲು ಸಾರ್ವಜನಿಕ ಮನವಿಯನ್ನೂ ಮಾಡಿದ್ದರು.
ವರ್ಲಿನ್ಡೆನ್ ರಕ್ತಸಿಕ್ತ ದೇಹ ಅವರ ಮನೆಯ ಡೈನಿಂಗ್ ಟೇಬಲ್ ಬಳಿ ಸಿಕ್ಕಿತ್ತು. ಆದರೆ ಟೇಬಲ್ ಮೇಲಿದ್ದ ಅವರ ಪರ್ಸ್ನಿಂದ ಹಣವಾಗಲೀ ಅಥವಾ ಇನ್ನಿತರ ವಸ್ತುಗಳಾಗಲೀ ನಾಪತ್ತೆಯಾಗಿರಲಿಲ್ಲ. ಹಾಗಾಗಿ ದರೋಡೆ ಮಾಡಲು ಕೊಲೆ ನಡೆದಿಲ್ಲ ಎಂಬ ಖಚಿತ ನಿರ್ಣಯಕ್ಕೆ ಪೊಲೀಸರು ಬಂದಿದ್ದರು. ವರ್ಲಿನ್ಡೆನ್ ಅವರನ್ನು ಗುಂಟರ್ ಕೊಂದಿದ್ದು ನವೆಂಬರ್ 20, 2020 ರಂದು. ಕೊಲೆ ಮಾಡಿದ 16 ತಿಂಗಳುಗಳ ಬಳಿಕ ಅವನು ತನ್ನ ಆಪ್ತ ಸ್ನೇಹಿತನೊಬ್ಬನ ಮುಂದೆ ಟೀಚರನ್ನು ಕೊಂದ ವಿಷಯದ ಬಗ್ಗೆ ಬಾಯಿ ಬಿಟ್ಟಿದ್ದ. ಈ ಆಪ್ತಮಿತ್ರ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಈಗ ಸತ್ಯ ಬಯಲಾಗಿದೆ.
ಹತ್ಯೆ ನಡೆದ ಸ್ಥಳದಲ್ಲಿ ದೊರೆತ ಕುರುಹುಗಳೊಂದಿಗೆ ತಾಳೆ ಮಾಡಲು ಗುಂಟರ್ ತನ್ನ ಡಿಎನ್ಎ ಪೊಲೀಸರಿಗೆ ನೀಡಿದಾಗ ಅದು ಮ್ಯಾಚ್ ಆಗಿದೆ. ಅವನು ಸ್ನೇಹಿತನ ಮುಂದೆ ಹತ್ಯೆ ನಡೆಸಿದನ್ನು ಹೇಳಿಕೊಂಡಿರದಿದ್ದರೂ ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದ. ಯಾಕೆಂದರೆ, ವರ್ಲಿನ್ಡೆನ್ ಅವರಿಂದ ಶಿಕ್ಷಣ ಪಡೆದ ಎಲ್ಲ ವಿದ್ಯಾರ್ಥಿಗಳ ಜೆನೆಟಿಕ್-ಸ್ಯಾಂಪಲ್ಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪೊಲೀಸರು ಆರಂಭಿಸಿದ್ದರು.
ತಾನು ನಡೆಸಿದ ಕೃತ್ಯದ ಸಮಗ್ರ ವಿವರವನ್ನು ಗುಂಟರ್ ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡಿದ್ದಾನೆ. ಅವನ ಹೇಳಿಕೆಯನ್ನು ತಪ್ಪೋಪ್ಪಿಗೆ ಎಂದು ಪರಿಗಣಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ತಾನು ವರ್ಲಿನ್ಡೆನ್ ಮಾಡಿದ ಅವಮಾನದಿಂದ ಬಹಳ ಹಿಂಸೆ ಅನುಭವಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ. ಅವನ ಹೇಳಿಕೆ ಮತ್ತು ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಎಷ್ಟು ಸಾಮ್ಯತೆ ಇದೆ ಅಂತ ನಾವು ಪರಿಶೀಲಿಸಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.