ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಶನಿವಾರ ಒಡಿಶಾದ ಜಾಜ್ಪುರದಲ್ಲಿ ಸಂಭವಿಸಿದೆ.
ಜಾಜ್ ಪುರದ ಖರಾಸ್ರೋಟಾ ನದಿದಡದಲ್ಲಿ ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿ ಈ ವರೆಗೂ 3 ಬಾಲಕರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಸಹಾಯಕ ಅಗ್ನಿಶಾಮಕ ಅಧಿಕಾರಿ ಪೂರ್ಣ ಚಂದ್ರ ಮರಾಂಡಿ ಅವರು, ‘ಈವರೆಗೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಇತರ ಮೂವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನಾವು ಆಗಮಿಸುವ ಮೊದಲೇ ಸ್ಥಳೀಯರು ಒಂದು ಮೃತದೇಹವನ್ನು ಹೊರತೆಗೆದಿದ್ದಾರೆ. ನಾವು ಇತರೆ ಇಬ್ಬರನ್ನು ಪತ್ತೆಹಚ್ಚಿದ್ದೇವೆ, ಮೂವರು ಇನ್ನೂ ಕಾಣೆಯಾಗಿದ್ದಾರೆ. ಅವರ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕಡಿಮೆ ಬೆಳಕಿನಿಂದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರಿಂದ, ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಭಾನುವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಸ್ಥಳೀಯರ ಪ್ರಕಾರ ಬಾಲಕರು ಶನಿವಾರ ಹೋಳಿ ಆಡಿದ ಬಳಿಕ ಸ್ನಾನಕ್ಕೆಂದು ನದಿಗೆ ತೆರಳಿದ್ದರು. “ಹೋಳಿ ಆಡಿದ ನಂತರ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಅವರಲ್ಲಿ ಒಬ್ಬರು ನದಿಯಲ್ಲಿ ಮುಳುಗುತ್ತಿರುವುದನ್ನು ಇತರೆ ಬಾಲಕರು ಗಮನಿಸಿದರು. ಸ್ನೇಹಿತನನ್ನು ರಕ್ಷಿಸಲು ಅವರು ಪ್ರಯತ್ನಿಸಿದರು. ಬಳಿಕ ಅವರೆಲ್ಲರೂ ಇತರರನ್ನು ರಕ್ಷಿಸುವ ಪ್ರಯತ್ನದಲ್ಲಿ ಒಬ್ಬೊಬ್ಬರಾಗಿ ಮುಳುಗಿದರು. ಕೊನೆಯದಾಗಿ, ನನ್ನ ಮಗ ರಕ್ಷಿಸಲು ಹೋದನು ಮತ್ತು ಅವನೂ ನದಿಯಲ್ಲಿ ಮುಳುಗಿದನು ಎಂದು ಓರ್ವ ಹುಡುಗನ ತಂದೆ ಸತ್ಯ ಚಂದ್ರ ಜೆನಾ ಹೇಳಿದ್ದಾರೆ.