ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಭಾರತ ತಂಡವು 110 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಭಾರತ ತಂಡ ನೀಡಿದ 230 ರನ್ಗಳ ಸವಾಲು ಬೆನ್ನತ್ತಿದ ಬಾಂಗ್ಲಾ 40.3 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 119 ರನ್ಗಳಷ್ಟೇ ಗಳಿಸಲು ಶಕ್ತವಾಯಿತು. ಬಾಂಗ್ಲಾದ ಲತಾ (24) ಮತ್ತು ಸಲ್ಮಾ ಖಾತೂನ್ (32) ಉತ್ತಮ ಪ್ರದರ್ಶನದ ಭರವಸೆ ಸೃಷ್ಟಿಸಿದರಾದರೂ ಹೆಚ್ಚು ಸಮಯ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಭಾರತದ ಪರ ಸ್ನೇಹ್ ರಾಣಾ 4 ವಿಕೆಟ್ , ಜೂಲನ್ ಗೋಸ್ವಾಮಿ ಮತ್ತು ಪೂಜಾ ತಲಾ ಎರಡು ವಿಕೆಟ್ ಕಬಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಸ್ಮೃತಿ ಮಂದಾನ (30) ಮತ್ತು ಶಫಾಲಿ ವರ್ಮಾ (42) ಜೋಡಿ ಉತ್ತಮ ಆರಂಭ ನೀಡಿತು. ಅನಂತರದ ಆಟಗಾರರು ಅಂತಹ ಭರವಸೆಯ ಆಟವನ್ನೇನೂ ಆಡಲಿಲ್ಲ. ಬಾಂಗ್ಲಾದ ರಿತು ಮೋನಿ 3 ವಿಕೆಟ್ ಉರುಳಿಸಿದರೆ, ನಹೀದ ಅಕ್ತರ್ 2 ವಿಕೆಟ್ ಪಡೆಯುವ ಮೂಲಕ ಭಾರತದ ರನ್ ಓಘಕ್ಕೆ ಕಡಿವಾಣ ಹಾಕಿದರು.
ಭಾರತವು ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ ಮೂರು ಪಂದ್ಯಗಳಲ್ಲಿ ಗೆಲುವು ಹಾಗೂ ಮೂರು ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು (ಸೆಮಿಫೈನಲ್) ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕು.