ಪಾವಗಡ ಬಸ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹೇಂದ್ರ ಇನ್ನಿಲ್ಲ. ಬೆನ್ನು ಮೂಳೆ ಮತ್ತು ತಲೆಗೆ ತೀವ್ರ ಪೆಟ್ಟಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಬುಡ್ಡಾರೆಡ್ಡಿಹಳ್ಳಿಯ ವಿದ್ಯಾರ್ಥಿ ಇದೀಗ ಚಿಕಿತ್ಸೆ ಫಲಿಸದೇ ಬಾರದ ಲೋಕಕ್ಕೆ ತೆರಳಿದ್ದಾರೆ.ಇದರೊಂದಿಗೆ ಬಸ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ.
ಕೈಗೆ ಬಂದಿದ್ದ ಮಗ ಮಹೇಂದ್ರನನ್ನು ಕಳೆದುಕೊಂಡು ಸೀನಪ್ಪ ದಂಪತಿಯ ಆಕ್ರಂದನ ಮುಗಿಲುಮುಟ್ಟಿದೆ.
ಮಹೇಂದ್ರ ವೈದ್ಯಕೀಯ ಆಪರೇಷನ್ ಗೆ 12 ಲಕ್ಷ ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ಅಷ್ಟು ವೆಚ್ಚವನ್ನು ಭರಿಸಲು ಸೀನಪ್ಪನ ಬಳಿ ಸಾಧ್ಯವಿಲ್ಲದ ಕಾರಣ ಪಾವಗಡದ ಜನತೆ ಉದಾರ ಮನಸ್ಸಿನಿಂದ ನೆರವಿನ ಹಸ್ತ ಚಾಚಿದ್ದರು.
ಮಹೇಂದ್ರಗೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದಾನಾ?
ಅಪಘಾತ ಆದ ದಿನವೇ ಹೆಚ್ಚಿನ ಚಿಕಿತ್ಸೆಗಾಗಿ ಮಹೇಂದ್ರ ನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆ ತರಲಾಗಿತ್ತು. ಆದರೆ, ICU ಬೆಡ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಿಕೊಂಡಿರಲಿಲ್ಲ. ಬೇರೆ ದಾರಿ ಇಲ್ಲದೆ ಮಹೇಂದ್ರನನ್ನು ಮತ್ತಿಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಕಾರವೂ ನೆರವಿಗೆ ಬಂದಿರಲಿಲ್ಲ.ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಮಹೇಂದ್ರನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು