ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಬಂದ್ ಬೆಳಗ್ಗೆ ಆರು ಗಂಟೆಯಿಂದ ಆರಂಭವಾಗಿದೆ. ಬುಧವಾರ ಬೆಳಗ್ಗೆ ಆರು ಗಂಟೆಯವರೆಗೂ ಈ ಮುಷ್ಕರ ಜಾರಿಯಲ್ಲಿ ಇರಲಿದೆ.
ಈ ಮುಷ್ಕರದಲ್ಲಿ ಅಖಿಲ ಭಾರತದ ಬ್ಯಾಂಕ್ ನೌಕರರ ಸಂಘಟನೆ ಪಾಲ್ಗೊಂಡಿದ್ದು, ಇಂದು ಮತ್ತೆ ನಾಳೆ ಬ್ಯಾಕಿಂಗ್ ಸೇವೆಗಳು ಬಂದ್ ಆಗಲಿವೆ. ವಿಮೆ, ಅಂಚೆ, ಆದಾಯ ತೆರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವೈದ್ಯಕೀಯ ಸೇವೆ, ಸಾರಿಗೆ, ಆಟೋ, ಕ್ಯಾಬ್, ತರಕಾರಿ ಸಾಗಣೆ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ.
ಬ್ಯಾಂಕ್ಗಳ ಖಾಸಗೀಕರಣಕ್ಕೆ ಬ್ಯಾಂಕ್ ನೌಕರರ ಸಂಘಟನೆ ವಿರೋಧಿಸುತ್ತಿದೆ. ಬ್ಯಾಂಕ್ ನೌಕರರು ಮಾತ್ರವಲ್ಲದೇ ಕಲ್ಲಿದ್ದಲು, ಉಕ್ಕು, ದೂರಸಂಪರ್ಕ, ಅಂಚೆ, ವಿಮೆ ವಲಯದ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈಲ್ವೆ ಕಾರ್ಮಿಕರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
ವಿದ್ಯುತ್ ಸರಬರಾಜು ಸೇವೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಈ ಮುಷ್ಕರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದೆ. ಇದು ರಾಜಕೀಯ ಪ್ರೇರಿತ ಬಂದ್ ಎಂದು RSS ಅಂಗ ಸಂಸ್ಥೆ ಭಾರತೀಯ ಮಜದುರ್ ಸಂಘ ಆರೋಪಿಸಿದೆ. ಬಂದ್ ನಿಂದ ದೂರ ಉಳಿದಿದೆ.