‘ಕಾಂಗ್ರೆಸ್ ಬಲಿಷ್ಠವಾಗಲು ಪ್ರಾಮಾಣಿಕವಾಗಿ ಬಯಸುತ್ತೇನೆ’, ‘ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಅತ್ಯಗತ್ಯ’ ಎಂದು ಪ್ರಧಾನಿ ಮೋದಿ ಸಂಫುಟದ ಪ್ರಭಾವಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ಎರಡು ಚಕ್ರಗಳ ಮೇಲೆ ಚಲಿಸುತ್ತದೆ. ಒಂದು ಆಡಳಿತ ಸರ್ಕಾರ ಮತ್ತೊಂದು ವಿರೋಧ ಪಕ್ಷ. ಪ್ರಜಾಪ್ರಭುತ್ವಕ್ಕೆ ಒಂದು ಬಲಿಷ್ಠ ವಿರೋಧ ಪಕ್ಷ ಅತ್ಯವಶ್ಯಕ. ಕಾಂಗ್ರೆಸ್ ಪಕ್ಷ ಬಲಿಷ್ಠ ಆಗಬೇಕು ಎಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಪ್ರಾದೇಶಿಕ ಪಕ್ಷಗಳು ವಶಪಡಿಸಿಕೊಳ್ಳುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ವಿರೋಧ ಪಕ್ಷ ಬಲಿಷ್ಠವಾಗಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಲೋಕಮಾತ್ ಜರ್ನಲಿಸಂನ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಕಿವಿ ಮಾತು ಹೇಳಿದ ಅವರು, ನನ್ನ ಹೃದಯದಿಂದ ಹೇಳುತ್ತೇನೆ. ಕಾಂಗ್ರೆಸ್ ಮುಂದೆ ಬಲಿಷ್ಠವಾಗಲಿದೆ. ಯಾರು ಕಾಂಗ್ರೆಸ್ನ ಸಿದ್ದಾಂತಗಳನ್ನು ಪಾಲಿಸುತ್ತಿದ್ದೀರಿ, ಪಕ್ಷದೊಂದೊದಿಗೆ ಗಟ್ಟಿಯಾಗಿ ನಿಂತುಕೊಳ್ಳಿ. ನಿಮ್ಮ ಕೆಲಸ ಮುಂದುವರೆಯಲಿ ಮತ್ತು ಸೋಲಿನಿಂದ ಹತಾಶರಾಗಬೇಡಿ. ಇಂದು ಸೋತರೆ ಮುಂದೊಂದು ದಿನ ಗೆಲುವು ನಿಮ್ಮದಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬಿಜೆಪಿ ನಾಯಕರ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಹೇಳಿಕೆ ನೀಡುತ್ತಾ, ಆ ಕನಸಿನೆಡೆಗೆ ಪಯಣಿಸುತ್ತಿರುವ ವೇಳೆಯಲ್ಲಿ ನಿತಿನ್ ಗಡ್ಕರಿಯವರ ಈ ಹೇಳಿಕೆ ಚರ್ಚೆಗೆ ಎಡೆಮಾಡಿದೆ.