ಆರೋಗ್ಯದೀಪ ಸ್ವಾಸ್ಥ್ಯ ಸಮಿತಿ ಮತ್ತು ಶ್ರೀ ಮಹಾಲಕ್ಷ್ಮಿ ಟ್ರಸ್ಟ್ ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಾಮಾಕ್ಷಿಪಾಳ್ಯದ ಕಮಲಾನಗರದಲ್ಲಿ ಇರುವ ಪ್ರಾಥಮಿಕ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇಸಿದ ಶ್ರೀಮತಿ ಎಸ್ ಪಿ ಹೇಮಲತಾ ಗೋಪಾಲಯ್ಯ, ಮಾಜಿ ಉಪಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತನಾಡಿ “ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಬಹಳ ಸಕ್ರೀಯವಾಗಿ ಕಾರ್ಯ ನಿರ್ವಸುತ್ತಿದ್ದಾರೆ. ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯದಂತೆ ನಾವು ಲಿಂಗ ಭೇದವನ್ನು ಮೀರಿ ನಿಂತು ಪುರುಷರಿಗೂ ಮಿಗಿಲಾಗಿ ಸಾಧನೆ ಮಾಡಬೇಕು. ಆರೋಗ್ಯದೀಪ ಸಂಸ್ಥೆಯು ಕಾಮಾಕ್ಷಿಪಾಳ್ಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆ ಮನೆಗೆ ಬಂದು ಆರೋಗ್ಯ ಸೇವೆ ನೀಡುತ್ತಿದ್ದಾರೆ. ಮಹಿಳೆ ಒಬ್ಬರು ಸಂಸ್ಥೆಯ ಸದಸ್ಯರಾದರೆ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಇವರ ಸೇವೆ ಶ್ಲಾಘನೀಯ. ಕಾಮಾಕ್ಷಿಪಾಳ್ಯದಲ್ಲಿ 6800 ಜನರಿಗೆ ಕೋವಿಡ್ ಲಸಿಕೆ ನೀಡಿದ್ದಾರೆ. ಈ ಸಂಸ್ಥೆಯ ಸೇವಾ ಸೌಲಭ್ಯವನ್ನು ನೀವೆಲ್ಲರೂ ಉಪಯೋಗಿಸಿ ಕೊಂಡು ತುಂಬಾ ಚೆನ್ನಾಗಿ ಅಭಿವೃದ್ಧಿ ಹೊಂದಬೇಕು ಎಂದು ನೆರೆದಿರುವ ಸಭಿಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಚಿವ ಶ್ರೀ ಕೆ ಗೋಪಾಲಯ್ಯ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ನಾವು ಕಟಿಬದ್ಧರಾಗಿದ್ದೇವೆ. ಇಲ್ಲಿಯ ಬಡ ಹಾಗೂ ಮಾಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯ ಇರುವ ಆಸ್ಪತ್ರೆಯನ್ನು ಈ ದಿನ ಉದ್ಘಾಟನೆ ಮಾಡಲಾಗಿದೆ. ಆರೋಗ್ಯದೀಪ ಸಂಸ್ಥೆಯ ಸಿಬ್ಬಂದಿ ನಮ್ಮ ಜೊತೆ ಜೊತೆಯಲಿ ಕೆಲಸ ಮಾಡಿ ಕರೋನ ಕಾಲದಲ್ಲಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಎಲ್ಲರೂ ಭಯಭೀತರಾಗಿ ಮನೆಯಲ್ಲಿ ಇದ್ದರೆ, ಈ ಸಂಸ್ಥೆಯ ಸಿಬ್ಬಂದಿ ಕೋವಿಡ್ ಲಸಿಕೆ, ಪಾಸಿಟಿವ್ ಆದವರಿಗೆ ಮನೆಯಲ್ಲಿ ಉಪಚಾರ, ಆಕ್ಸಿಜನ್ ಸೇವೆ ಮೊದಲಾದವನ್ನು ಪ್ರಾಣಾಪಾಯ ಬದಿಗೊತ್ತಿ ಸೇವೆ ಸಲ್ಲಿಸಿದ್ದಾರೆ. ಸರಕಾರದ ಜೊತೆಯಲ್ಲಿ ಅವರು ನೀಡುವ ಸೇವೆ ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳಿ. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭ ಕೋರಿದರು.
ಕಮಲನಗರದ ವಾರ್ಡ್ ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಮಾತನಾಡಿ “ಆರೋಗ್ಯದೀಪ ಸಂಸ್ಥೆಯ ಕಾರ್ಯಕರ್ತರು ಬಹಳ ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸಂಸ್ಥೆಯ ಕಾರ್ಯಕ್ರಮದಿಂದ ಬಹಳಷ್ಟು ಜನ ಉಪಯೋಗ ಪಡೆದು ಕೊಂಡಿದ್ದಾರೆ. ನಾನು ಒಮ್ಮೆ ನಮ್ಮ ವಾರ್ಡಿನ ಸದಸ್ಯರ ಯೋಗಕ್ಷೇಮ ವಿಚಾರಿಸಲು ಅವರ ಮನೆಗೆ ಹೋದಾಗ ಸಂಸ್ಥೆಯ ಕ್ಲಿನಿಕ್ ಸಿಬ್ಬಂದಿ ಅವರ ಮನೆಗೆ ಬಂದು ವೈದ್ಯಕೀಯ ಸೇವೆ ನೋಡುವುದನ್ನ ಕಂಡು ನಾನು ಬಹಳ ಖುಷಿ ಪಟ್ಟೆ. ಈಗಿನ ಕಾಲದಲ್ಲಿ ಮನೆಗೆ ಬಂದು ಆಕ್ಸಿಜನ್ ಸಪೋರ್ಟ್ ಅಂತ ಸೇವೆಗಳನ್ನು ಕೊಡುವ ಸಂಸ್ಥೆ ಎಲ್ಲಿಯೂ ಇಲ್ಲಾ. . ಕಮಲಾ ನಗರದ ಎಲ್ಲಾ ಮಹಿಳೆಯರು ಈ ಸೇವೆಯ ಉಪಯೋಗ ಪಡೆದು ಕೊಳ್ಳಬೇಕು ಎಂದರು.
ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ 11 ಜನ ಮಹಿಳಾ ಸಿಬ್ಬಂದಿಯವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅವರಿಗೆ ಕಿರುಕಾಣಿಕೆಯನ್ನು ಶ್ರೀಮತಿ ಹೇಮಲತಾ ಗೋಪಾಲಯ್ಯನವರು ನೀಡಿದರು.
ವೇದಿಕೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ನಾಗರತ್ನ ಲೋಕೇಶ್, ಆರೋಗ್ಯದೀಪ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೈಲಾ, ಕಾಮಾಕ್ಷಿಪಾಳ್ಯ ಉಪಸಮಿತಿ ಅಧ್ಯಕ್ಷೆ ಶ್ರೀಮತಿ ಮಂಗಳಗೌರಿ ಉಪಸ್ಥಿತರಿದ್ದರು.
ಆರೋಗ್ಯದೀಪ ಸಂಸ್ಥೆಯ 200 ಕ್ಕೂ ಹೆಚ್ಚಿನ ಮಹಿಳೆಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರಿಗೆ ಆರೋಗ್ಯದ ಮಾಹಿತಿಯ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ನಿರ್ಮಲ ಕಾರ್ಯಕ್ರಮ ನಿರ್ವಹಿಸಿದರೆ ಇನ್ನೋರ್ವ ಕಾರ್ಯಕರ್ತೆ ಶ್ರೀಮತಿ ಮೀನಾಕ್ಷಿ ವಂದಿಸಿದರು. ಸಂಸ್ಥೆಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಶ್ರೀ ನಾರಾಯಣ ಗೌಡ ಕಾರ್ಯಕ್ರಮ ಯಶಸ್ವಿಯಾಗಲು ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.