`ಸಂತೋಷ್ ಪಾಟೀಲ್ ಯಾರು ಅಂತ ನನಗೆ ಗೊತ್ತಿಲ್ಲ. ಸಂತೋಷ್ ಪಾಟೀಲ್ ಯಾರು ಅಂತ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಕೇಳಿದೆ. ಅವರಿಗೂ ಗೊತ್ತಿಲ್ಲ. ನನ್ನ ವಿರುದ್ಧ ಯಾವುದೋ ಷಡ್ಯಂತ್ರ ನಡೆದಿದೆ’ ಎಂದು ತಮ್ಮ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
`ನಮ್ಮ ಇಲಾಖೆಯಿಂದ ಅವರಿಗೆ (ಸಂತೋಷ್ ಪಾಟೀಲ್)ಗೆ ಯಾವುದೇ ವರ್ಕ್ ಆರ್ಡರ್ ಕೊಟ್ಟಿಲ್ಲ. ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಇಲ್ಲ’ ಎಂದರು.
`ಸAತೋಷ್ ಪಾಟೀಲ್ ಎಂಬ ವ್ಯಕ್ತಿ ದೆಹಲಿಗೆ ಹೋಗಿ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ನಮ್ಮ ಕಡೆಯವರು ಕಮಿಷನ್ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದಕ್ಕೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಕಚೇರಿಯಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರ ವಿವರಣೆ ಕೇಳಿದ್ದರು. ಅತೀಕ್ ಅವರು ಸ್ಪಷ್ಟನೆ ನೀಡಿದ್ದಾರೆ. ಪಂಚಾಯತ್ರಾಜ್ ಇಲಾಖೆಯಿಂದ ಸಂತೋಷ್ ಅವರಿಗೆ ಯಾವುದೇ ವರ್ಕ್ ಆರ್ಡರ್ ಮಾಡಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗೆ ವಿವರಣೆ ನೀಡಿದ್ದಾರೆ’ ಎಂದು ಬೆಂಗಳೂರಲ್ಲಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
`ಷಡ್ಯಂತ್ರದ ಬಗ್ಗೆ ಮಾರ್ಚ್ 10ಎರಂದು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನಮ್ಮ ವಕೀಲರು ವಾದ ಮಾಡುತ್ತಿದ್ದಾರೆ. ನಾಳೆ ಅವರಿಗೆ ನೋಟಿಸ್ ಕೊಡುತ್ತಾರೆ. ಸಂತೋಷ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ ಎಂದು ಬೆಳಗಾವಿ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ’ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.