ಬೆಂಗಳೂರಿನಲ್ಲಿ 74 ವರ್ಷದ ಪಟ್ಟಾಭಿರಾಮನ್ ಆಟೋ ಓಡಿಸುತ್ತಾರೆ. ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಗರ್ಲ್ ಫ್ರೆಂಡ್ ಗಾಗಿ ಈ ವಯಸ್ಸಲ್ಲಿ ಆಟೋ ನಡೆಸುತ್ತೇನೆ ಎನ್ನುತ್ತಾರೆ. ಈ ವಯಸ್ಸಲ್ಲಿ ಗರ್ಲ್ ಫ್ರೆಂಡಾ..? ಆಶ್ಚರ್ಯ ಆಗಬೇಡಿ.. ಅವರು ಗರ್ಲ್ ಫ್ರೆಂಡ್ ಎಂದಿದ್ದು ಅವರ ಪತ್ನಿಯನ್ನೇ.. ಪತ್ನಿಯನ್ನು ಎಂದಿಗೂ ಪ್ರಿಯತಮೆಯಂತೆ ನೋಡಿಕೊಳ್ಳುವೆ. ಸೇವಕಿಯಂತೆ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.
ಮುಂಬೈನ ಖಾಸಗಿ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಅವರು ನಿವೃತ್ತಿ ನಂತರ, ಮಕ್ಕಳ ಮೇಲೆ ಡಿಪೆಂಡ್ ಆಗಿಲ್ಲ. ಕಳೆದ 14 ವರ್ಷದಿಂದ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ. ಪತ್ನಿ ಅಂದರೆ ಪ್ರೀತಿ, ಗೌರವ.. ದೂರು ದುಮ್ಮಾನಗಳೇ ಇಲ್ಲದ ಜೀವನ ಆನಂದ ರಥದಲ್ಲಿ ಸಾಗುತ್ತಿರುವ ಪಟ್ಟಭಿರಾಮನ್ ಕಥನ ಓರ್ವ ಪ್ಯಾಸೆಂಜರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದೆ.
ಕೆಲವು ಜೀವನ ಪಾಠಗಳು ಪುಸ್ತಕ ಓದುವುದರಿಂದ ತಿಳಿಯುತ್ತವೆ. ಕೆಲವು ಜೀವನ ಪಾಠಗಳು ನಡೆದಾಡುವ ಪುಸ್ತಕಗಳ ಮಾದರಿಯ ವ್ಯಕ್ತಿಗಳಿಂದ ತಿಳಿಯುತ್ತವೆ.
ಕಳೆದ ಗುರುವಾರ ಬೆಂಗಳೂರಿನ ನಿಖಿತಾ ಅಯ್ಯರ್ ಎಂಬ ಪ್ರೊಫೆಷನಲ್ ಉದ್ಯೋಗಿ, ಪಟ್ಟಾಭಿರಾಮನ್ ಅವರ ಮೂಲಕ ಜೀವನ ಪಾಠ ಓದಿದ್ದಾರೆ. ಅದನ್ನು ಲಿಂಕ್ಡ್ ಇನ್ ಮೂಲಕ ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಆ ಪೋಸ್ಟ್ ನಲ್ಲಿ ಏನಿದೆ ಎಂಬುದನ್ನು ನೋಡೋಣ.
ಆ ದಿನ ಬೆಳಗ್ಗೆ ಕೆಲಸಕೆ ಹೊರಟೆ. ನಾನು ಬುಕ್ ಮಾಡಿದ್ದ ಉಬೆರ್ ಆಟೋ ಡ್ರೈವರ್ ನನ್ನನ್ನು ರೋಡ್ ಮಧ್ಯೆ ಬಿಟ್ಟು ಹೊರಟು ಹೋದ. ಅಷ್ಟೊತ್ತಿಗೆ ನನಗೆ ಕಚೇರಿ ಸಮಯ ಆಗಿತ್ತು. ನನ್ನ ಕಚೇರಿ ಬೇರೆ ನಗರದ ಹೊರ ವಲಯದಲ್ಲಿ ಇತ್ತು. ಹೇಗೆ ಆಫೀಸ್ ಸೇರೋದು ಎಂಬ ದುಗುಡ ಅವರಿಸಿತ್ತು.
ಇದನ್ನು ಗಮನಿಸಿದ ಆ ಹಿರಿಯ ವ್ಯಕ್ತಿ ಆಟೋ ನಿಲ್ಲಿಸಿ ಸ್ವಚ್ಛವಾದ ಇಂಗ್ಲಿಷ್ ನಲ್ಲಿ ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಎಷ್ಟು ಕೇಳ್ತಾರೋ ಏನೋ ಈಯಪ್ಪ ಎಂದು ಮುಖ ಮಾಡಿದೆ. ಅದನ್ನು ಅರ್ಥ ಮಾಡಿಕೊಂಡವರಂತೆ, ಬನ್ನಿ ಮೇಡಂ.. ನೀವು ಏನು ಕೊಡ್ತಿರೋ ಕೊಡಿ ಎಂದು ಮತ್ತದೇ ಒಳ್ಳೆಯ ಇಂಗ್ಲಿಷ್ ನಲ್ಲಿ ಕೇಳಿದರು.
ನಾನು ಆಶ್ಚರ್ಯದಿಂದಲೇ ಆಟೋ ಹತ್ತಿದೆ. ಇಷ್ಟು ಒಳ್ಳೆಯ ಇಂಗ್ಲಿಷ್ ನಿಮಗೆ ಹೇಗೆ ಬಂತು ಎಂದು ಕೇಳಿದೆ. ಇದಕ್ಕೆ ಅವರು ನಾನು ಈ ಹಿಂದೆ ಇಂಗ್ಲಿಷ್ ಲೆಕ್ಚರರ್ ಆಗಿದ್ದೆ ಎಂದು ಉತ್ತರಿಸಿದರು. ಆ ನಂತರ ಅವರೇ, ಈಗ ನೀವು ಮತ್ತೇಕೆ ಆಟೋ ಓಡಿಸುತ್ತೀರಿ ಎಂದು ಕೇಳಬೇಕು ಎಂದುಕೊಂಡಿದ್ದೀರಾ ಅಲ್ಲವೇ ಎಂದು ಕೇಳಿದರು. ಅವರು ನನ್ನ ಪಯಣದ 45 ನಿಮಿಷ ಅವರ ಜೀವನ ಕಥನ ಹೇಳಿದರು.
ಅವರ ಹೆಸರು ಪಟ್ಟಭಿರಾಮನ್. MA, M. ED, ಬೆಂಗಳೂರಿನಲ್ಲಿ ಲೆಕ್ಚರರ್ ಉದ್ಯೋಗ ಸಿಗಲಿಲ್ಲ. ಎಲ್ಲಿ ಹೋದರು ಯಾವ ಜಾತಿ ಎಂದು ಕೇಳಿ, ತಿಳಿಸುವುದಾಗಿ ಹೇಳಿ ಕಳಿಸುತ್ತಿದ್ದರು. ಮನಸ್ಸಿಗೆ ಬೇಜಾರ್ ಆಗಿ ಮುಂಬೈಗೆ ಹೋದೆ. ಪೊವಯ್ ಕಾಲೇಜಿನಲ್ಲಿ 20ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿದೆ.. 60 ತುಂಬಿದ ಮೇಲೆ ಬೆಂಗಳೂರಿಗೆ ಬಂದು ಆಟೋ ಓಡಿಸುತ್ತಿದ್ದೇನೆ.
ಪ್ರೈವೇಟ್ ಲೆಕ್ಚರರ್ಗೆ ಪೆನ್ಷನ್ ಇರಲ್ಲ. ಮತ್ತೆ ಟೀಚರ್ ಆಗೋಣ ಎಂದರೇ 10-15ಸಾವಿರಕ್ಕಿಂತ ಜಾಸ್ತಿ ಸಂಬಳ ನೀಡಲ್ಲ. ಅದಕ್ಕೆ ಆಟೋ ಓಡಿಸುತ್ತಿದ್ದೇನೆ. ಇದರಿಂದ ದಿನಕ್ಕೆ 750-1500 ರೂಪಾಯಿವರೆಗೂ ದುಡಿಯುತ್ತೇನೆ. ಈ ಆದಾಯದಲ್ಲಿ ನನ್ನ ಗರ್ಲ್ ಫ್ರೆಂಡ್ ಅನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಎಂದರು.
ಅವರ ಆ ಮಾತಿಗೆ ನನಗೆ ನಗು ಬಂತು.. ಗರ್ಲ್ ಫ್ರೆಂಡಾ? ಎಂದೇ. ಅದಕ್ಕೆ ಅವರು ಹೌದು, ನನ್ನ ಪತ್ನಿಯನ್ನು ನಾನು ಗರ್ಲ್ ಫ್ರೆಂಡ್ ಅಂತಲೇ ಕರೆಯುತ್ತೇನೆ. ಪತ್ನಿಯನ್ನು ಯಾವತ್ತೂ ಕಡಿಮೆ ಮಾಡಿ ನೋಡಿಲ್ಲ. ಗಂಡ ಎಂದ ಕೂಡಲೇ ಪತ್ನಿ ಅವರ ಸೇವಕರಾಗಿಯೇ ಕಾಣುತ್ತಾರೆ. ಆದರೇ ನನಗದು ಇಷ್ಟ ಇಲ್ಲ. ಆಕೆಗೆ ಈಗ 72 ವರ್ಷ. ಈ ವಯಸ್ಸಿನಲ್ಲಿಯೂ ಮನೆಯನ್ನು, ನನ್ನನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ ಎಂದರು.
ಮತ್ತೆ ಮಕ್ಕಳು? ಅವರ ಜೀವನ ಅವರದ್ದು. ನಾನು ನನ್ನ ಪತ್ನಿ ಕಾಡುಗೋಡಿಯಲ್ಲಿ ಸಿಂಗಲ್ ಬೆಡ್ ರೂಮ್ ಫ್ಲಾಟ್ ನಲ್ಲಿ ವಾಸ ಮಾಡುತ್ತೇವೆ. ಅದರ ಬಾಡಿಗೆ 12ಸಾವಿರ. ಅದನ್ನು ನನ್ನ ಮಗನೇ ಪಾವತಿ ಮಾಡುತ್ತಾನೆ. ಅದನ್ನು ಬಿಟ್ಟು ನಾವು ಏನನ್ನೂ ಅವರಿಂದ ಬಯಸಲ್ಲ. ಇರುವುದರಲ್ಲಿ ನಾವಿಬ್ಬರು ಸುಖವಾಗಿ ಜೀವಿಸುತ್ತಿದ್ದೇವೆ.
ನೋಡಿ ನಾನು ರಸ್ತೆ ರಾಜ. ನನಗೆ ಇಷ್ಟ ಬಂದಾಗ ಆಟೋ ತೆಗೆಯುತ್ತೇನೆ. ಇಲ್ಲ ಎಂದರೇ ಮನೆಯಲ್ಲೇ ಇರುತ್ತೇನೆ ಎಂದು ನಗುತ್ತಾರೆ ಪಟ್ಟಾಭಿರಾಮನ್.
ಅವರೊಂದಿಗೆ ಮಾತನಾಡುತ್ತಿದ್ದ ಸಮಯದಲ್ಲಿ ಅವರ ಮಾತಿನಲ್ಲಿ ಬೇಸರ, ನಿರಾಸೆ ಕಂಡುಬರಲಿಲ್ಲ. ಅವರ ಜೀವನದ ಬಗ್ಗೆ ಹಳಿದುಕೊಳ್ಳಲಿಲ್ಲ. ಇಂಥವರೇ ನಿಜವಾದ ಹೀರೋಗಳು. ಆದರೇ ಇವರ ಬಗ್ಗೆ ನಮಗೆ ತಿಳಿದಿರಲಿಲ್ಲ ಅಷ್ಟೇ. ನಿಜವಾಗಿಯೂ ಇವರ ಪರಿಚಯ ನನಗೆ ಸ್ಫೂರ್ತಿ ನೀಡಿತು.
ಲಕ್ಷ, ಕೋಟಿ ಇದ್ದರೇನು ಬಂತು.. ಮಾನಸಿಕ ನೆಮ್ಮದಿ ಮುಖ್ಯ ಎಂಬುದನ್ನು ಪಟ್ಟಭಿರಾಮನ್ ಋಜುವಾತುಪಡಿಸಿದ್ದಾರೆ.
ಅವರು ಪತ್ನಿಯನ್ನು ನೋಡಿಕೊಳ್ಳುವ ಪದ್ಧತಿ ಅವರನ್ನು ಓರ್ವ ಆದರ್ಶ ಪತಿಯ ಸ್ಥಾನದಲ್ಲಿ ನಿಲ್ಲಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪಟ್ಟಾಭಿರಾಮನ್ ಅವರಿಗೆ ಒಳ್ಳೆಯ ಮಾರ್ಕ್ಸ್ ಬಂದಿವೆ.