ರಾಜ್ಯದಲ್ಲಿ ಮಾಂಸ ಕಡಿಯುವುದಕ್ಕೆ ಸಂಬಂಧಿಸಿದಂತೆ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಸಾಕಷ್ಟು ಸದ್ದು ಮಾಡುತ್ತಿದೆ. ಹಿಂದೂ ಪರ ಸಂಘಟನೆಗಳು ಮುಸ್ಲಿಂರು ಪ್ರಾಣಿಗಳನ್ನು ಹಲಾಲ್ ಕಟ್ ರೀತಿಯಲ್ಲಿ ವಧೆ ಮಾಡ್ತಾರೆ ಇದು ಒಳ್ಳೆಯದಲ್ಲ. ಜಟ್ಕಾ ಕಟ್ ರೀತಿಯಲ್ಲಿ ಪ್ರಾಣಿವಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹಿಂದೂ ಸಮಾಜದಲ್ಲಿ ಜಟ್ಕಾ ಪದ್ಧತಿಯ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಹಾಗಾದರೆ, ಈ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು..? ಇವೆರಡರ ನಡುವಿನ ವ್ಯತ್ಯಾಸವೇನು..? ಯಾವ ಮಾಂಸ ಆರೋಗ್ಯಕ್ಕೆ ಉತ್ತಮ..? ಎನ್ನುವುದರ ಬಗ್ಗೆ ಖ್ಯಾತ ಪಶುವೈದ್ಯ ಡಾ.ದೊಡ್ಡಮಲ್ಲಯ್ಯ ಈರಣ್ಣ ಅವರ ಬರಹ ಇಲ್ಲಿದೆ.
ಈ ಹಲಾಲ್ ಮತ್ತು ಜಟ್ಕಾ ಪದ್ದತಿಗಳು ಮಾಂಸವನ್ನು ಪಡೆಯುವ ಪದ್ದತಿಗಳು. ಜಟ್ಕಾ ಪದ್ದತಿ ಎಂದರೆ ಪ್ರಾಣಿಯನ್ನು ಅಂದರೆ ಕುರಿ, ಮೇಕೆ, ಕೋಣಗಳನ್ನು ನಿಲ್ಲಿಸಿ ಕೊಡಲಿಯನ್ನೋ, ಮಚ್ಚನ್ನೋ ತೆಗೆದುಕೊಂಡು ಕತ್ತನ್ನು ಒಂದೇ ಸಾರಿ ಕಡಿಯುವ ವಿಧಾನಕ್ಕೆ ಜಟ್ಕಾ ಎನ್ನುತ್ತಾರೆ( ಜಟ್ಕಾ ಅಂದರೆ ತಕ್ಷಣದ ಚಲನೆ, ಅಂದರೆ ತಕ್ಷಣ ಮಾಡುವುದು ಎಂದರ್ಥ. ಅಂದರೆ ಒಂದೇ ಏಟಿಗೆ ಕಡಿಯುತ್ತಾರಲ್ಲಾ ಅದಕ್ಕೆ ಈ ಹೆಸರು).
ಇದನ್ನು ಸಾಮಾನ್ಯವಾಗಿ ಹಿಂದುಗಳು ಪಾಲಿಸುತ್ತಾರೆ. ಅದರಲ್ಲೂ ಸಮಾಜದ ತಳಸಂಸ್ಕೃತಿಗಳು ಮಾರೆಮ್ಮಾ, ದ್ಯಾವಮ್ಮ ಸೇರಿದಂತೆ ಮುಂತಾದ ಜಾತ್ರೆಗಳಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಾರೆ. ಇದರಲ್ಲಿ ಪ್ರಾಣಿಗೆ ನೋವಾಗುವುದು ಸಹಜ. ಆದರೆ ಅದು ಹೆಚ್ಚು ಇರಲ್ಲಾ. ಇದರಲ್ಲಿ ಬರುವ ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲಾ. ಏಕೆಂದರೆ ಈ ಪದ್ದತಿ ಪಾಲಿಸಿದಾಗ ಪ್ರಾಣಿಯ ದೇಹದಲ್ಲಿ ಇರುವ ರಕ್ತ ಪೂರ್ತಿಯಾಗಿ ಹೊರಗೆ ಬರೋಲ್ಲಾ. ದೇಹದಲ್ಲಿ ರಕ್ತ ಉಳಿದರೆ ಅಂತಹ ಮಾಂಸ ಬೇಗೆ ಕೆಡುತ್ತೆ. ಅದನ್ನು ಡಿಕಾಂಪೋಸ್ ಎನ್ನುತ್ತೇವೆ.
ರಕ್ತವು ದೇಹದಲ್ಲಿ ಸೂಕ್ಷ್ಮಾಣುಗಳು ಬೆಳೆಯಲು ಸಹಕಾರಿಯಾಗುತ್ತೆ. ರಕ್ತ ಏಕೆ ದೇಹದಿಂದ ಹೊರಗೆ ಬರೋಲ್ಲವೆಂದರೆ ಜಟ್ಕಾ ಪದ್ದತಿಯಂತೆ ಕಡಿದಾಗ ಕತ್ತಿನ ಬೆನ್ನುಮೂಳೆಯಲ್ಲಿರುವ ದೊಡ್ಡನರವು ಕತ್ತರಿಸುವುದರಿಂದ ನರಗಳ ಕ್ರಿಯೆ ನಿಂತು ಹೋಗಿ ದೇಹದ ರಕ್ತವು ಹೊರಬರಲು ಸಾಧ್ಯವಾಗುವುದಿಲ್ಲಾ. ಅದಕ್ಕೆ ಜಟ್ಕಾ ಪದ್ದತಿಯಲ್ಲಿ ಬರುವ ಮಾಂಸವು ಪರಿಶುದ್ದವಲ್ಲಾ ಎಂದು ಮಾಂಸ ವಿಜ್ಞಾನ ಹೇಳುತ್ತೆ.
ಇನ್ನು ಹಲಾಲ್ ಎಂದರೆ ಅರಾಬಿಕ್ ನಲ್ಲಿ ಅನುಮತಿಸುವುದು ಎಂದರ್ಥ. ಎಂದರೆ ನೀನು ತಿನ್ನುವ ಮಾಂಸವನ್ನು ಅನುಮತಿಸಿದೆ ಎಂದು ಅರ್ಥ. ಹಲಾಲ್ ಪದ್ದತಿಯಲ್ಲಿ ಪ್ರಾಣಿಯನ್ನು ಮಲಗಿಸಿ ಕತ್ತಿನ ಭಾಗದಲ್ಲಿ ಕೆಳಗಡೆಯಿಂದ ಜ್ಯೂಗಲಾರ್ ಅಭಿದಮನಿ ಮತ್ತು ಕೆರಾಟಿಡ್ ಅಪಧಮನಿಗಳನ್ನು ಕತ್ತರಿಸುತ್ತಾರೆ. ಬೆನ್ನುಮೂಳೆಯನ್ನು( Spinal chord) ಕತ್ತರಿಸುವುದಿಲ್ಲ.
ಆದ್ದರಿಂದ ಇಡೀ ದೇಹದ ನರಮಂಡಳ ವ್ಯವಸ್ಥೆ ಹಾಗೆ ಇರುವುದರಿಂದ ಈ ಮೇಲೆ ಹೇಳಿದ ಎರಡೂ ರಕ್ತನಾಳಗಳಿಂದ ದೇಹದ ರಕ್ತ ಸಂಪೂರ್ಣವಾಗಿ ಬಸಿದು ಹೊರಬರುತ್ತದೆ. ಹಲಾಲ್ ಮಾಡಿದ ಮೇಲೆ ಸ್ವಲ್ಪ ಹೊತ್ತು ಕತ್ತು ಕತ್ತರಿಸದೆ ಹಾಗೆ ಬಿಟ್ಟಿರುತ್ತಾರೆ. ಇದರಿಂದ ಮಾಂಸ ಶುದ್ದವಾಗಿರುತ್ತದೆ ಎಂದು ಮಾಂಸ ವಿಜ್ಞಾನ ಹೇಳುತ್ತದೆ. ಆದರೆ ಬೇಗನೆ ಬೆನ್ನುಮೂಳೆ ಕತ್ತರಿಸುವುದರಿಂದ ರಕ್ತವು ಪೂರ್ಣವಾಗಿ ಹೊರಬರುವುದಿಲ್ಲ.
ವೈಜ್ಞಾನಿಕವಾಗಿ ಹಲಾಲ್ ಎಂದರೆ ಕತ್ತು ಕೊಯ್ಯುವ ಪದ್ದತಿ ಅಷ್ಟೇ. ಹಿಂದುಗಳಲ್ಲಿಯೂ ಸ್ವಂತಕ್ಕೆ ಅಂದರೆ ಮನೆಯಲ್ಲಿ ಅಥವಾ ವಾರ ವಾರವೂ ತಿನ್ನುವ ಮಾಂಸವನ್ನು ಪಡೆಯಲು ಹಲಾಲ್ ಪದ್ದತಿಯನ್ನೇ ಅನುಸರಿಸುತ್ತಾರೆ. ಈ ಅಲ್ಲಾಹುವಿನ ಮಂತ್ರ ಇವೆಲ್ಲಾ ಅವರ ನಂಬಿಕೆಗಳು. ನಿಜವಾಗಲೂ ಹಲಾಲ್ ಪದ್ದತಿ ವೈಜ್ಞಾನಿಕವಾದುದು. ಅದಕ್ಕೂ ಅಲ್ಲಾಹುವಿನ ಮಂತ್ರಕ್ಕೆ ಸಂಬಂಧವಿಲ್ಲಾ ಎನ್ನುತ್ತದೆ. ಧಾರ್ಮಿಕ ವಿಚಾರಗಳಿಗೆ ಮಾಂಸ ವಿಜ್ಞಾನ ಅಡ್ಡಬರುವುದಿಲ್ಲ.
ಡಾ.ದೊಡ್ಡಮಲ್ಲಯ್ಯ ಈರಣ್ಣ ಖ್ಯಾತ ಪಶುವೈದ್ಯರು
https://youtu.be/MytNDW8fxFY