ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀಶೈಲದಲ್ಲಿ ನೀರಿನ ಬಾಟಲ್ ಬೆಲೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕರ್ನಾಟಕದ ಇಬ್ಬರಿಗೆ ಗಾಯಗಳಾಗಿವೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ ರೆಡ್ಡಿ ಹೇಳಿದ್ದಾರೆ.
ಬುಧವಾರ ತಡರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ. ಗಲಭೆಯ ವೇಳೆ ಸ್ಥಳೀಯ ಅಂಗಡಿಗಳ ಮೇಲೂ ದಾಳಿ ನಡೆದಿದೆ. ಘರ್ಷಣೆಯಲ್ಲಿ ಕರ್ನಾಟಕ ನೋಂದಣಿಯ 200ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಲಾಗಿದೆ. ಪೊಲೀಸ್ ಬ್ಯಾರಿಕೇಡ್ಗೆ ಬೆಂಕಿ ಹಚ್ಚಲಾಗಿದೆ. ವಾಹನಗಳಿಗೆ ಕಟ್ಟಲಾಗಿದ್ದ ಕರ್ನಾಟಕದ ಧ್ವಜ ಕಿತ್ತು ಸುಟ್ಟುಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಲಾಟೆ ಆರಂಭವಾದಾಗ ಬೆರಳೆಣಿಕೆಯಷ್ಟು ಪೊಲೀಸರು ಸ್ಥಳದಲ್ಲಿದ್ದರು. ನಂತರ ಹೆಚ್ಚಿನ ಪೊಲೀಸರನ್ನು ಕರೆಸಲಾಯಿತು. ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶ್ರೀಶೈಲದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಙೆ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಿಂದ ತೆರಳಿದ್ದ ಪಾದಯಾತ್ರಿಗಳು ಹಾಗೂ ಸ್ಥಳೀಯರ ನಡುವೆ ಶ್ರೀಶೈಲದ ಪಾತಾಳಗಂಗೆಗೆ ಹೋಗುವ ರಸ್ತೆಯಲ್ಲಿರುವ ಪಾದಗಟ್ಟೆ ಬಳಿ ಘರ್ಷಣೆ ನಡೆದಿದೆ. ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲ್ ಮಾರಾಟ ಮಾಡುತ್ತಿರುವುದನ್ನು, ಪಾದಯಾತ್ರೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಅವರು ಪ್ರಶ್ನಿಸಿದ್ದು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಅಂಗಡಿಯವರು ಮಚ್ಚಿನಿಂದ ವಾರಿಮಠ ಮೇಲೆ ಹಲ್ಲೆ ಮಾಡಿದ್ದಾರೆ. ವಾರಿಮಠ ಅವರನ್ನು ಬಿಡಿಸಲು ಹೋದ ಹುನಗುಂದ ತಾಲ್ಲೂಕು ಅಮೀನಗಡದ ಪಾದಯಾತ್ರಿ ಗೋಪಾಲ ರುದ್ರಪ್ಪ ಅವರಿಗೂ ಏಟು ಬಿದ್ದಿದೆ. ಇದಕ್ಕೆ ಕರ್ನಾಟಕದ ಯಾತ್ರಿಕರು ಪ್ರತಿರೋಧ ತೋರಿದಾಗ ಇಡೀ ಪಟ್ಟಣಕ್ಕೆ ಗಲಭೆ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.
ಶ್ರೀಶೈಲದಲ್ಲಿ ಕನ್ನಡಿಗರು ಮತ್ತು ಸ್ಥಳಿಯರ ನಡುವಿನ ಗಲಾಟೆ ಬೂದಿ ಮುಚ್ಚಿದೆ ಕೆಂಡದಂತಿದೆ. ಸ್ಥಳಿಯರು ದೊಣ್ಣೆಗಳನ್ನು ಹಿಡಿದುಕೊಂಡು ಸುತ್ತುತ್ತಿದ್ದಾರೆ ಎಂದು ಕನ್ನಡಿಗರು ಆರೋಪಿಸಿದ್ದಾರೆ.