ಅದೊಂದು ಭಾರೀ ಸಭೆ.. ಸಿಎಂ ಕರುಣಾನಿಧಿ ಜೊತೆ ಅನೇಕ ಮಂತ್ರಿಗಳು, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿ ಟಾಪ್ ಹೀರೋಗಳೆಲ್ಲಾ ವೇದಿಕೆ ಮೇಲಿದ್ದರು. ಆಡಳಿತಾರೂಢ ಪಕ್ಷದ ಕಾರ್ಯಕತರು, ನಟ ಅಭಿಮಾನಿಗಳಿಂದ ಇಡೀ ಹಾಲ್ ಕಿಕ್ಕಿರಿದಿತ್ತು.ಮೊದಲಿಗೆ ಸಿನಿ ನಟರ ಪರವಾಗಿ ಮಾತನಾಡಲು ಮೈಕ್ ತೆಗೆದುಕೊಂಡಿದ್ದು ತಲಾ ಅಜಿತ್ ಕುಮಾರ್..
ಮುಖ್ಯಮಂತ್ರಿಗಳೇ.. ಚಿತ್ರರಂಗಕ್ಕೆ ನೀವು ಹಲವು ಸಹಾಯ ಮಾಡಿದ್ದೀರಿ.. ಆದರೇ ನನ್ನದೊಂದು ಚಿಕ್ಕ ಮನವಿ.. ಅದನ್ನು ಕೇಳಬೇಕು. ನಿಮ್ಮ ಪಾರ್ಟಿಯ ಕೆಲವರು ನಮ್ಮ ಸಿನಿಮಾದವರನ್ನು ಬೆದರಿಸಿ ನಿಮ್ಮ ಕಾರ್ಯಕ್ರಮಗಳಿಗೆ ಬರುವಂತೆ ಮಾಡುತ್ತಿದ್ದಾರೆ. ದಯಮಾಡಿ ಮೊದಲು ಅವರನ್ನು ಕಂಟ್ರೋಲ್ ಮಾಡಿ.
ತಲಾ ಅಜಿತ್ ಮಾತುಗಳಿಗೆ ಇಡೀ ಸಭಾಂಗಣ ಸ್ಟನ್ ಆಗಿ ಹೋಯಿತು. ಎಲ್ಲರಿಗೂ ಈಗ ಏನಾಗುತ್ತೋ ಏನೋ ಎಂಬ ಟೆನ್ಶನ್. ಇಡೀ ಸಭೆಯಲ್ಲಿ ನಿಶ್ಯಬ್ಧ ಆವರಿಸಿತ್ತು. ಆ ಸಂದರ್ಭದಲ್ಲಿ ಜೋರಾದ ಶಿಳ್ಳೆ ಕೇಳಿಬಂತು. ಆ ಶಿಳ್ಳೆ ಹಾಕಿದ್ದು ಬೇರ್ಯಾರು ಅಲ್ಲ.. ಸೂಪರ್ ಸ್ಟಾರ್ ರಜಿನಿಕಾಂತ್.. ಈ ಬೆನ್ನಲ್ಲೇ ಸಭೆಯಲ್ಲಿದ್ದವರೆಲ್ಲಾ ಶಿಳ್ಳೆ ಸೇರಿಸಿದರು.
ತಲಾ ಅಜಿತ್ ಟೀಕಿಸಿದ್ದು ತಮ್ಮ ಪಕ್ಷದ ನಾಯಕರನ್ನೇ ಆದರೂ, ಸಿಎಂ ಕರುಣಾನಿಧಿ ಒಂದು ಮೆಚ್ಚುಗೆಯ ನೋಟ ಬೀರಿದ್ದರು. ಅಂದ ಹಾಗೇ ಈ ಘಟನೆ 2011ರದ್ದು. ಅಧಿಕಾರ ಪಕ್ಷದವರು ಅಂದ್ಕೊಂಡರೇ ತಮ್ಮ ಸಿನಿಮಾ ಜೀವನಕ್ಕೆ ತೊಂದರೇ ಆಗಬಹುದು ಎಂದು ತಿಳಿದಿದ್ದರೂ, ಮನಸ್ಸಿನ ಮಾತನ್ನು ಹೇಳಲು ಅಜಿತ್ ಸ್ವಲ್ಪವೂ ಹಿಂಜರಿದಿರಲಿಲ್ಲ.
ತಾವು ನಂಬಿದ ವಿಷಯಗಳಿಗಾಗಿ ಎಷ್ಟು ದೂರ ಬೇಕಾದರೂ ಸಾಗುವ ಸಾಹಸಿ ಧೋರಣೆಯೇ ಓರ್ವ ಮೆಕಾನಿಕ್ನನ್ನು ಎಫ್-2 ಕಾರ್ ರೇಸರ್ ಆಗಿ ಬದಲಿಸಿತ್ತು. ಸಿನಿಮಾ ಲೋಕಕ್ಕೂ ಕಾಲಿಡುವಂತೆ ಮಾಡಿತ್ತು.
ಒಂದು ಕಾಲದಲ್ಲಿ ತಮಿಳು ಮಾತನಾಡಲು ಬಾರದೇ ಒದ್ದಾಡಿದ್ದ ಅಜಿತ್, ಸಿನಿಮಾ ಜೀವನ ಆರಂಭ ಆಗಿದ್ದು ಹೈದ್ರಾಬಾದ್ನಲ್ಲಿ. ಅಜಿತ್ ತಂದೆ ಸುಬ್ರಹ್ಮಣ್ಯಂ ಅವರದ್ದು ತಮಿಳು ಕುಟುಂಬ. ಆದರೇ, ಫಾರ್ಮಸಿ ಓದಿದ್ದ ಸುಬ್ರಹ್ಮಣ್ಯಂಗೆ ಕೊಲ್ಕೊತಾದಲ್ಲಿ ಕೆಲಸ ಸಿಕ್ಕಿ ಅಲ್ಲಿಯೇ ಸೆಟಲ್ ಆಗಿದ್ದರು. ಕರಾಚಿ ಮೂಲದ ಮೋಹಿನಿಯವರ ಪರಿಚಯ ಪ್ರೀತಿಗೆ ತಿರುಗಿ ಮದುವೆ ಮೂಲಕ ಒಂದಾದರು. ಮದುವೆ ಬಳಿಕ ಉದ್ಯೋಗ ನಿಮಿತ್ತ ಸಿಕಿಂದ್ರಬಾದ್ಗೆ ಶಿಫ್ಟ್ ಆಗಿದ್ದರು.
ಮೊದಲು ಅನಿಲ್, ನಂತರ ಅಜಿತ್ ಹುಟ್ಟಿದರು. ಅಜಿತ್ಗೆ ಒಂದೂವರೆ ವರ್ಷ ಇದ್ದಾಗ ಚೆನ್ನೈಗೆ ಶಿಫ್ಟ್ ಆದರು. ಹೈಯರ್ ಮಿಡ್ಲ್ ಕ್ಲಾಸ್ ಕುಟುಂಬವಾದ ಕಾರಣ ಮನೆಯಲ್ಲಿ ಇಂಗ್ಲೀಷ್ ಬಳಕೆ ಹೆಚ್ಚಾಗಿತ್ತು. ಹೀಗಾಗಿ ಅಜಿತ್ ಯಾವ ಪ್ರಾದೇಶಿಕ ಭಾಷೆಯನ್ನು ಸರಿಯಾಗಿ ಕಲಿಯಲೇ ಇಲ್ಲ. ಆಟ ಪಾಠದಲ್ಲಿ ಮುಂದಿದ್ದ ಅಜಿತ್ಗೆ ಒಂದು ಸಮಸ್ಯೆ ಇತ್ತು. ಒಂದು ವಾಕ್ಯವನ್ನು ತಪ್ಪಿಲ್ಲದೇ ಬರೆಯಲು ಅಜಿತ್ಗೆ ಬರುತ್ತಲೇ ಇರಲಿಲ್ಲ. ಹೀಗಾಗಿ ಇವನನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ಕೂರಿಸಲು ಆಗಲ್ಲ ಎಂದು ಶಾಲೆ ಪ್ರಾಂಶುಪಾಲರು ಮನೆಗೆ ಕಳಿಸಿದರು. ಮನೆಯಲ್ಲಿ ಖಾಲಿ ಇದ್ದ ಮಗನನ್ನು ಅಪ್ಪ ಸುಬ್ರಹ್ಮಣ್ಯಂ ಆಫೀಸ್ಗೆ ಕರೆದೊಯ್ದರು. ಅಲ್ಲಿ ಅಜಿತ್ಗೆ ರೇಸಿಂಗ್ ಕ್ರೇಜ್ ಹುಟ್ಟಿಕೊಂಡಿತ್ತು.
ರೇಸಿಂಗ್ ಎಕ್ಸ್ಪರ್ಟ್ ಆಗಲು ರಾಯಲ್ ಎನ್ಫೀಲ್ಡ್ ಬೈಕ್ ತಯಾರಿ ಕಂಪನಿಯಲ್ಲಿ ಮೆಕಾನಿಕ್ ಅಪ್ರೆಂಟೀಸ್ ಆಗಿ ಸೇರಿಕೊಂಡರು ಅಜಿತ್. ಆಗ ಅಜಿತ್ ವಯಸ್ಸು 16.
ಆದರೆ, ಅಜಿತ್ ಸಾಗುತ್ತಿರುವ ಹಾದಿ ಬಗ್ಗೆ ಪೋಷಕರ ವಿರೋಧ ಇತ್ತು. ಹೀಗಾಗಿ ಬಲವಂತದಿಂದ ಮೆಕಾನಿಕ್ ಜಾಬ್ ಬಿಡಿಸಿದರು.ಗಾರ್ಮೆಂಟ್ಸ್ ಎಕ್ಸ್ಪೋರ್ಟ್ ಕಂಪನಿಯಲ್ಲಿ ಕೆಲಸ ಕೊಡಿಸಿದರು. ಕೆಲಸದ ನಡುವೆಯೂ ಸ್ನೇಹಿತರ ಬಳಿ ಸಾಲ ಪಡೆದು ರೇಸಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅಜಿತ್ಗೆ ಹಣಕಾಸು ನೆರವು ನೀಡಿದವರಲ್ಲಿ ಎಸ್ಪಿಬಿ ಪುತ್ರ ಒಬ್ಬರು.
10ನೇ ತರಗತಿ ಟ್ಯುಟೋರಿಯಲ್ಸ್ ವೇಳೆ ಪರಿಚಯ ಆಗಿದ್ದ ಎಸ್ಪಿಬಿ ಅವರ ಪುತ್ರ ಎಸ್ಪಿ ಚರಣ್, ಮುಂದೆ ಅಜಿತ್ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ಸಹ ಕಾರಣವಾದರು. ಎಸ್ಪಿ ಚರಣ್ ನೆರವಿನಿಂದಲೇ ಗೊಲ್ಲಪುಡಿ ಪುತ್ರ ಶ್ರೀನಿವಾಸ್ ನಿರ್ದೇಶನದ ಪ್ರೇಮಪುಸ್ತಕಂ ಚಿತ್ರದಲ್ಲಿ ಅಜಿತ್ ಹೀರೋ ಆದರು. ಆದರೆ, ಈ ಸಿನಿಮಾ ಫ್ಲಾಪ್ ಆದ ಕಾರಣ ಅಜಿತ್ಗೆ ತೆಲುಗಿನಲ್ಲಿ ಮತ್ತೆ ಅವಕಾಶ ಸಿಗಲಿಲ್ಲ.
ಎಸ್ಪಿ ಚರಣ್ ನೆರವಿನಿಂದ ತಮಿಳಿನ ಅಮರಾವತಿ ಚಿತ್ರದಲ್ಲಿ ಅಜಿತ್ ನಟಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಆದರೆ, ಈ ಖುಷಿಯನ್ನು ಅನುಭವಿಸುವ ಸ್ಥಿತಿಯಲ್ಲಿ ಅಜಿತ್ ಇರಲಿಲ್ಲ. ಯಾಕಂದರೇ ಕಾರ್ ರೇಸಿಂಗ್ ವೇಳೆ ಬೆನ್ನುಹುರಿಗೆ ಪೆಟ್ಟು ತಿಂದು ಆರು ತಿಂಗಳು ಬೆಡ್ ರೆಸ್ಟ್ನಲ್ಲಿ ಅಜಿತ್ ಇದ್ದರು.
ನಂತರ ರಾಧಿಕಾ ಜೊತೆ ಪವಿತ್ರ ಸಿನಿಮಾದಲ್ಲಿ ಕ್ಯಾನ್ಸರ್ ಪೇಶೆಂಟ್ ಆಗಿ ಅಜಿತ್ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ನಂತರ ಬರೀ ಎರಡನೇ ಹೀರೋ ಪಾತ್ರಗಳೇ ಬರಲಾರಂಭಿಸಿದ್ದವು. ಅಜಿತ್ ಚಿತ್ರ ಜೀವನಕ್ಕೆ ತಿರುವು ನೀಡಿದ್ದ ಮಣಿರತ್ನ ನಿರ್ದೇಶನದ ಆಶಾ.. ಮರು ವರ್ಷ ರಿಲೀಸ್ ಆದ ಪ್ರೇಮಲೇಖ ಕೂಡ ಹಿಟ್ಟಾಯಿತು. ಯುವ ಜನತೆಗೆ ಅಜಿತ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ನಟಿಯೊಬ್ಬರ ಪ್ರೀತಿಯಲ್ಲಿ ಮಿಂದರು.
ಆದರೆ, ಚಿತ್ರದ ಶೂಟಿಂಗ್ ವೇಳೆ ಮತ್ತೆ ಬೆನ್ನುಹುರಿ ಸಮಸ್ಯೆ ಕಂಡುಬಂದು, ಮತ್ತೆ ಸರ್ಜರಿಗೆ ಒಳಗಾದರು. ಆರು ತಿಂಗಳು ಬೆಡ್ ಮೇಲಿಂದ ಎದ್ದೇಳಲಿಲ್ಲ. ಸಮಸ್ಯೆ ಇದಲ್ಲ. 1997ರಲ್ಲಿ ರಿಲೀಸ್ ಆದ ಅಜಿತ್ ನಟನೆಯ ಎಲ್ಲಾ ಸಿನಿಮಾಗಳು ಫ್ಲಾಪ್ ಆದವು. ಇದಕ್ಕೆ ಸರಿಯಾಗಿ ಪ್ರೀತಿಸಿದ ನಟಿ ಕೂಡ ಕೈಕೊಟ್ಟರು. ಅಜಿತ್ ಖಿನ್ನತೆಗೆ ಒಳಗಾದರು.
ಆದರೇ ಕೆಲ ದಿನಗಳಲ್ಲೇ ಮಾನಸಿಕವಾಗಿ ಸದೃಢರಾದರು. 1999ರಲ್ಲಿ ಅಜಿತ್ ದ್ವಿಪಾತ್ರದಲ್ಲಿ ನಟಿಸಿದ ವಾಲಿ ಸಿನಿಮಾ ಬಿಗ್ಗೆಸ್ಟ್ ಹಿಟ್ ಎನಿಸಿಕೊಂಡಿತು. ಅದೇ ವರ್ಷ ಅಮರ್ಕಲಂ ಶೂಟಿಂಗ್ನಲ್ಲಿಯೇ ಶಾಲಿನಿಯನ್ನು ಪ್ರೀತಿಸಿ ಮರು ವರ್ಷ ಮದುವೆಯಾದರು. ಇದಾಗಿ 20 ವರ್ಷ ಕಳೆದಿದೆ. ಈಗಲೂ ತಮಿಳು ಸಿನಿಮಾ ಅಭಿಮಾನಿಗಳಿಗೆ ಇವರೇ ಬೆಸ್ಟ್ ಪೇರ್.
ಅಜಿತ್ ಕೆರೀರ್ನ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಿಟ್ ಎಷ್ಟಿವೆಯೋ ಅಷ್ಟೇ ಫ್ಲಾಪ್ಗಳು ಇವೆ. ಸರಣಿ ಸರ್ಜರಿಗಳ ಕಾರಣ ಸ್ಟೀರಾಯ್ಡ್ ಬಳಕೆ ಮಾಡಿ ಆಕಾರ ವಿಕಾರ ಮಾಡಿಕೊಂಡರು. ಒಂದು ಹಂತದಲ್ಲಿ 100 ಕೆಜಿ ದಾಟಿದ್ದರು. ಕೆಲ ಪತ್ರಿಕೆಗಳ ಮುಖ ಪುಟಗಳಲ್ಲಿ ಟ್ರೋಲ್ಗೂ ಒಳಗಾದರು. ಆದರೆ, ಕೇವಲ ಎರಡೇ ತಿಂಗಳಲ್ಲಿ 25 ಕೆಜಿ ತೂಕ ಇಳಿಸಿ ಫಿಟ್ ಎನಿಸಿಕೊಂಡರು.
ನಂತರ ಬಂದ ಬಿಲ್ಲಾ ಸಿನಿಮಾದಲ್ಲಿ ಹೊಸ ಸ್ಟೈಲ್ನಲ್ಲಿ ಕಾಣಿಸಿಕೊಂಡರು. ಅದು ಅಜಿತ್ ಪಾಲಿಗೆ ಸೆಕೆಂಡ್ ಇನ್ನಿಂಗ್ಸ್, ವಲಿಮೈವರೆಗೂ ಅಜಿತ್ ಸಕ್ಸಸ್ ಗ್ರಾಫ್ ಚನ್ನಾಗಿಯೇ ಇದೆ. ತೆಲುಗು ಮಾರ್ಕೆಟ್ನಲ್ಲಿ ಅಜಿತ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ.
ಎರಡು ವರ್ಷದ ಹಿಂದಿನವರೆಗೂ ಅಜಿತ್ ರಾಜಕೀಯಕ್ಕೆ ಬರಲಿದ್ದಾರೆ. ಇದಕ್ಕಾಗಿಯೇ ಅಜಿತ್ ತಮ್ಮ ಅಭಿಮಾನಿಗಳ ಸಂಘವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು. ಇದು ಅಜಿತ್ ಕಿವಿಗೆ ಬಿದ್ದಿದ್ದೇ ತಡಾ, ಯಾವ ನಾಯಕನೂ ಕೈಗೊಳ್ಳದ ನಿರ್ಧಾರವನ್ನು ತೆಗೆದುಕೊಂಡರು. ತಮ್ಮ ಎಲ್ಲಾ ಅಭಿಮಾನ ಸಂಘಗಳನ್ನು ರದ್ದು ಮಾಡಿಸಿದರು.
ಡಿಯರ್ ಸರ್ಸ್ ಅಂಡ್ ಮೇಡಮ್ಸ್, ನಾನು ಅಂತಾ ಅಲ್ಲ ಯಾವ ನಟನಿಗಾಗಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ನನ್ನ ಮೇಲಿನ ಪ್ರೀತಿಯಿಂದ ನೀವು ಸ್ಥಾಪಿಸಿದ ಈ ಅಭಿಮಾನ ಸಂಘಗಳಿಗಾಗಿ ನಿಮ್ಮ ಅಮೂಲ್ಯ ವ್ಯರ್ಥ ಆಗುತ್ತಿದೆ ಎಂದು ಎನಿಸಿಯೇ ಅವುಗಳನ್ನು ರದ್ದು ಮಾಡುವಂತೆ ಕೋರುತ್ತಿದ್ದೇನೆ. ದಯಮಾಡಿ ನಿಮ್ಮ ಗಮನವೆಲ್ಲಾ ನಿಮ್ಮ ಕೆರೀರ್ ಮೇಲೆ.. ಕುಟುಂಬದ ಮೇಲಿರಲಿ.. ಈ ಹಂತದಲ್ಲಿ ನೀವು ಸಾಧಿಸುವ ಚಿಕ್ಕ ಚಿಕ್ಕ ಯಶಸ್ಸುಗಳೇ ಸಾಕು.. ಅದೇ ನೀವು ನನಗೆ ಕೊಡುವ ಕಾಣಿಕೆ.
ಅಜಿತ್ ಅವರ ಇಂಥಾ ಧೈರ್ಯ ಕನ್ನಡದ ಯಾವ star ನಟರಿಗಾದರೂ ಇದೆಯಾ?