ಆಜಾನ್ ವಿಚಾರದಲ್ಲಿ ಸರ್ಕಾರ ಹೊಸ ಕಾನೂನು ತಂದಿಲ್ಲ, ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯಾವುದೇ ಸಂಘಟನೆಯಾಗಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿ-ಸುವ್ಯವಸ್ಥೆ ಕೈಗೊಳ್ಳಲು ಕ್ರಮ ತೆಗೆದುಕೊಳ್ಳುತ್ತೇವೆ, ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಒಂದೇ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈಗ ಹಿಂದೂ-ಮುಸ್ಲಿಂ ಧಾರ್ಮಿಕ ವಿಚಾರಗಳ ಬಗ್ಗೆ ನಡೆಯುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇವೆಲ್ಲಾ ಹೊಸ ವಿಚಾರಗಳೇನು ಅಲ್ಲ, ಹಲವಾರು ವರ್ಷಗಳಿಂದ ಇವೆ. ಕೆಲವು ಆದೇಶಗಳು 2001, 2002, ಹೈಕೋರ್ಟ್ ತೀರ್ಪು ಆಧಾರದ ಮೇಲೆ ಮಾಡಿದ್ದೇವೆ. ನಾವು ಇಂದಿನ ಬಿಜೆಪಿ ಸರ್ಕಾರ ಹೊಸ ಆದೇಶವನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಧರ್ಮವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜವಾಗಲಿ, ಯಾವುದೇ ಸಂಘಟನೆಯಾಗಲಿ ಕಾನೂನು ಕೈಗೆತ್ತಿಕೊಳ್ಳದೆ ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ,ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಎಷ್ಟು ಡೆಸಿಮಲ್ ವರೆಗೆ ಬಳಸಬೇಕು ಹಿಂದಿನ ಆದೇಶವಿದ್ದು, ಅದನ್ನು ಹಂತಹಂತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದರು.