ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ನೀಡಿರುವ ಸಮನ್ಸ್ಗೆ ತಡೆ ನೀಡುವಂತೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದ ಆರೋಪಿ ಸಂಖ್ಯೆ 2 ಆಗಿರುವ ಯಡಿಯೂರಪ್ಪ ಅವರನ್ನು ಏಪ್ರಿಲ್ 19 ರಂದು ವಿಚಾರಣೆಗೆ ಹಾಜರಾಗುವಂತೆ ವಿಚಾರಣಾ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು.
ಐ.ಟಿ ಕಾರಿಡಾರ್ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪ ಸಂಬಂಧ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಏಪ್ರಿಲ್ 19ರಂದು ಖುದ್ದು ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
2013ರಲ್ಲಿ ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿರುವ ವಿಶೇಷ ನ್ಯಾಯಾಲಯ, ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿ ವಿಚಾರಣಾ ಪ್ರಕ್ರಿಯೆ ಕೈಗೆತ್ತಿಕೊಂಡಿತ್ತು. ಐ.ಟಿ. ಕಾರಿಡಾರ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪೈಕಿ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲಿದೆ.
ಈ ಪ್ರಕರಣದಲ್ಲಿ ಮೂಲ ದೂರುದಾರರಾದ ವಾಸುದೇವ ರೆಡ್ಡಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. 2015ರಲ್ಲಿ ಹೈಕೋರ್ಟ್ ದೇಶಪಾಂಡೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತ್ತು. ಉಳಿದ ಎಂಟು ಜನರ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಆದರೆ ಎರಡನೇ ಆರೋಪಿಯಾಗಿರುವ ಯುಡಿಯೂರಪ್ಪ ವಿರುದ್ಧದ ಪ್ರಕರಣ ಹಾಗೆಯೇ ಇದೆ.
ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ಎರಡು ಭಾರಿ ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ‘ಬಿ’ ವರದಿ ಸಲ್ಲಿಸಿದ್ದರು. ಎರಡೂ ವರದಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. 2021ರ ನ. 27ರಂದು ಎರಡನೇ ‘ಬಿ’ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ವಿಚಾರಣೆ ಆರಂಭಿಸುವುದಾಗಿ ಆದೇಶಿಸಿತ್ತು.