ಹಳೇಗುಡ್ಡದಹಳ್ಳಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಉರ್ದು ಮಾತನಾಡಲು ಬಾರದ್ದಕ್ಕೆ ಕೊಲೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿಕೆ ನೀಡಿದ್ದರು. ಇದೀಗ, ತಮ್ಮದೇ ಹೇಳಿಕೆಯನ್ನು ವಾಪಸ್ ಪಡೆದಿರುವ ಅವರು ಭಾಷೆಯ ವಿಚಾರಕ್ಕೆ ಹತ್ಯೆ ನಡೆದಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮೊದಲು ಮಾತನಾಡಿದ್ದ ಅವರು, ಯುವಕ ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಆತ ಚಿಕನ್ ಖರೀದಿ ಮಾಡಲು ಹೋದಾಗ ಅಂಗಡಿಯವರು ಉರ್ದು ಮಾತನಾಡುವಂತೆ ಹೇಳಿದ್ದಾರೆ. ಆದರೆ, ಚಂದ್ರುವಿಗೆ ಉರ್ದು ಮಾತನಾಡಲು ಬಂದಿಲ್ಲ. ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಪ್ರಕರಣ ಸಂಬಂಧ ಕೆಲವರನ್ನು ಬಂಧನಕ್ಕೊಳಪಡಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದರು. ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದು, ಭಾಷೆಯ ಕಾರಣಕ್ಕೆ ಹತ್ಯೆ ನಡೆದಿಲ್ಲ ಎಂದು ಹೇಳಿದ್ದಾರೆ.
ಹಳೇ ಗುಡ್ಡದಹಳ್ಳಿ ಸಮೀಪ ಸೋಮವಾರ ತಡರಾತ್ರಿ ಚಿಕನ್ ರೋಲ್ ತಿನ್ನಲು ಸ್ನೇಹಿತ ಸೈಮನ್ ರಾಜ್ ಜೊತೆ ಚಂದ್ರು ಹೋಗಿದ್ದ ಸಂದರ್ಭದಲ್ಲಿ ಹತ್ಯೆ ನಡೆದಿದೆ.
ರೈಲ್ವೇ ಗೂಡ್ಸ್ ಶೆಟ್ ನಲ್ಲಿ ಹೊರಗುತ್ತಿಗೆ ಆಧಾರದಡಿ ಚಂದ್ರು ಕೆಲಸಮಾಡುತ್ತಿದ್ದ. ಮಂಗಳವಾರ ಆತನ ಆಪ್ತ ಸ್ನೇಹಿತ ಸೈಮನ್ ರಾಜ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಇಷ್ಟದ ತಿಂಡಿ ಚಿಕನ್ ರೋಲ್ ಕೊಡಿಸುವ ಸಲುವಾಗಿ ತಡರಾತ್ರಿ 2 ಗಂಟೆ ಸುಮಾರಿಗೆ ಹಳೇ ಗುಡ್ಡದಹಳ್ಳಿಗೆ ಸೈಮನ್ ನನ್ನು ಕರೆದುಕೊಂಡು ಬಂದಿದ್ದಾನೆ.
ಆಪ್ತ ಸ್ನೇಹಿತ ಸೈಮನ್ ರಾಜ್ ಹುಟ್ಟುಹಬ್ಬದ ಪ್ರಯುಕ್ತ ಚಿಕನ್ ಊಟ ಕೊಡಿಸಲು ಬೈಕ್ನಲ್ಲಿ ಕರೆದುಕೊಂಡು ಹೊರಟಿದ್ದರು. ಕಿರಿದಾದ ರಸ್ತೆಯಾದ ಕಾರಣ ಶಾಹೀದ್ ಎಂಬುವವರ ಬೈಕ್ ಚಂದ್ರು ಅವರ ಬೈಕ್’ಗೆ ಸ್ಪರ್ಶಿಸಿದೆ. ಈ ವೇಳೆ ಚಂದ್ರು ಬೈದಿದ್ದು, ಕೊನೆಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹತ್ಯೆಯಾಗಿದೆ. ಕೊಲೆಯಾದ ಯುವಕ ಕ್ರಿಶ್ಚಿಯನ್ ಎಂದು ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಟ್ವೀಟ್ ಮಾಡಿ ಹೇಳಿದ್ದಾರೆ.
ಆದರೆ, ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉರ್ದು ಮಾತನಾಡದ್ದಕ್ಕೆ ಹತ್ಯೆಯಾಗಿದೆ ಎಂದು ಹೇಳಿದ್ದು, ಪ್ರಕರಣ ತಿರುವು ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಹಳೇ ಗುಡ್ಡದಹಳ್ಳಿಯ ಶಾಹೀದ್ ಪಾಷ, ಹೊಸಕೋಟೆಯ ಶಾಹೀದ್ ಅಲಿಯಾಸ್ ಗೂಳಿ ಹಾಗೂ 17 ವರ್ಷದ ಬಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಭಾಷೆಯ ವಿಚಾರಕ್ಕೆ ಹತ್ಯೆಯಾಗಿಲ್ಲ ಎಂದು ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್ಸೈಟ್ನಲ್ಲಿ ವರದಿ ಮಾಡಲಾಗಿದೆ.
https://factcheck.ksp.gov.in/%e0%b2%ae%e0%b3%81%e0%b2%b8%e0%b3%8d%e0%b2%b2%e0%b2%bf%e0%b2%82-%e0%b2%8f%e0%b2%b0%e0%b2%bf%e0%b2%af%e0%b2%be%e0%b2%97%e0%b3%86-%e0%b2%ac%e0%b2%82%e0%b2%a6%e0%b3%81-%e0%b2%89%e0%b2%b0%e0%b3%8d/
https://youtu.be/h7I0nH5ZadI