ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಹಿಂದೂ ಸಂಘಟನೆಗಳ ಆಟ ನಡೆದಿಲ್ಲ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಅಭಿಯಾನವನ್ನು ಶಿಕಾರಿಪುರದ ಹುಚ್ಚರಾಯಸ್ವಾಮಿ ಜಾತ್ರೆಗೂ ವಿಸ್ತರಿಸಲು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಆದರೇ, ಈ ಒತ್ತಾಯಕ್ಕೆ ಹುಚ್ಚರಾಯಸ್ವಾಮಿ ಜಾತ್ರೆ ಸಂಚಾಲಕರು ಮಣಿದಿಲ್ಲ.
ಮುಸ್ಲಿಂ ಸೇರಿ ಎಲ್ಲಾ ಧರ್ಮದ ವ್ಯಾಪಾರಿಗಳಿಗೂ ದೇವಸ್ಥಾನದ ಅವರಣದಿಂದ ದೂರದಲ್ಲಿ ವಾಣಿಜ್ಯ ಮಳಿಗೆ ಮತ್ತು ಆಟಿಕೆ ಮಳಿಗೆ, ಆಟಿಕೆ ಯಂತ್ರ ಹಾಕಲು, ವ್ಯಾಪಾರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಾತ್ರಾ ಮಹೋತ್ಸವದ ಸಂಚಾಲಕ ಗುರುರಾಜ್ ರಾವ್ ಜಗತಾಪ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶಿಕಾರಿಪುರ ಜಾತ್ರೆಯಲ್ಲಿ ಕೋಮು ಸೌಹಾರ್ದತೆ ಮೆರೆಯಲು ತೀರ್ಮಾನಿಸಿದ್ದಾರೆ.
ಇದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಫೆಕ್ಟ್ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದಲ್ಲಿ ಕೋಮು ವಿಚಾರಗಳನ್ನು ಮುನ್ನೆಲೆಗೆ ಬರಲು ಅವಕಾಶ ನೀಡಿರಲಿಲ್ಲ. ಆದರೇ, ಬೊಮ್ಮಾಯಿ ಮುಖ್ಯಮಂತ್ರಿ ಆದ ಕೂಡಲೇ ಕೋಮು ಸಾಮರಸ್ಯ ಕದಡುವ ಯತ್ನಗಳು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ.
ಏಪ್ರಿಲ್ 15,16ರಂದು ಹುಚ್ಚರಾಯಸ್ವಾಮಿ ಜಾತ್ರೆ ನಡೆಯಲಿದೆ.