ದಿಗಂತದ ಅಂಚಿನಲ್ಲಿ ಮರೆಯಾಗುವ ಬೆಳಕು ಕಂಡು ಕೊರಗದಿರು ಯಾಕೆಂದರೆ ನಾಳೆ ಸೂರ್ಯೋದಯವಾಗಲಿದೆ. ಹಾಗೆಯೇ ಕಷ್ಟ ಬಂದಾಗ ಜೀವನದ ಅಂತ್ಯವೆಂದು ಬೇಸರಿಸದಿರು ಯಾಕೆಂದರೆ ನಾಳೆ ಸುಖದ ಉದಯವಾಗಲಿದೆ…..ಇದಕ್ಕೊಂದು ಅತ್ಯುತ್ತಮ ಉದಾಹರಣೆ ನಿರಂಜನ್ ಜೈನ್ ಕುದ್ಯಾಡಿ.
ಅಳದಂಗಡಿಯ ಹಳ್ಳಿ ಕೊಂಪೆಯಲ್ಲೊಂದು ದೈತ್ಯ ಶಕ್ತಿ ಅಡಗಿತ್ತು. ಆ ಶಕ್ತಿಯೇ ಬಾಂದಾಜೆ ಕುಮಾರ ಬಂಗ ಮತ್ತು ಪುಷ್ಪಾವತಿ ಅಮ್ಮನವರ ಸುಪುತ್ರ ನಿರಂಜನ್ ಜೈನ್ ಕುದ್ಯಾಡಿ. ಈ ಮೇರು ಶಕ್ತಿಯನ್ನು ಎಳೆ ತಂದು ಪ್ರಕಾಶಿಸಬೇಕಾದರೆ ಕೊರೋನಾವೇ ಬರಬೇಕಾಯಿತು. ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಿಸಿದ್ದ ಕೊರೋನಾ ಕಾಲದಲ್ಲಿ ಆನ್ಲೈನ್ ಮಾಧ್ಯಮಗಳು ಜಾಗೃತವಾದವು. ಹಲವಾರು ಸ್ವಾಧ್ಯಾಯ ಬಳಗಗಳು ಪ್ರಾರಂಭವಾಗಿ ಧರ್ಮ ಪ್ರಭಾವನೆಯನ್ನು ಮಾಡಲು ಪ್ರಾರಂಭಿಸಿದವು.ನಿರಂಜನ್ ರವರಂತಹ ಎಲೆ ಮರೆಯ ಕಾಯಿಗಳಂತಿದ್ದ ಅಮೂಲ್ಯ ಪ್ರತಿಭೆಗಳನ್ನು ಬೆಳಕಿಗೆ ತಂದ ಗೌರವ ಆನ್ಲೈನ್ ಮಾಧ್ಯಮಕ್ಕೆ ಸಲ್ಲುತ್ತದೆ. ದುಡ್ಡಿದ್ದವರು, ಬಾಯಿಬಲ ಇದ್ದವರು ಎಲ್ಲಾ ಕಡೆ ಕೆಲವೊಮ್ಮೆ ಮಾಯಾಚಾರದಿ ಮೆರೆದರು. ಜೈನ ಧರ್ಮದ ತತ್ತ್ವ ಗಳನ್ನು ವಿಶ್ವದಾದ್ಯಂತ ನೆನಪಿಸಿದ ಮಹಾಮಾರಿ ಕೆಲವರ ಪಾಲಿಗಂತೂ ವರವಾಗಿ ಪರಿಣಮಿಸಿತು.
ದೈಹಿಕ ಬಲ ಕಡಿಮೆ ಇದ್ದರೂ, ತನ್ನ ಆತ್ಮಬಲದಿಂದಲೇ ದೇಶ ವಿದೇಶಗಳಲ್ಲಿ ಕುದ್ಯಾಡಿಯ ಹೆಸರು ಮನೆ ಮಾತಾಗುವಂತೆ ಮಾಡಿದರು. ಆಬಾಲ ವೃದ್ಧರೆಲ್ಲರೂ ಕುದ್ಯಾಡಿಯವರನ್ನು ಕೊಂಡಾಡುವುದೇ ಕೊಂಡಾಡುವುದು. ಇವರ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಮೆಚ್ಚಿ ಮೂಡಬಿದರೆ, ನರಸಿಂಹರಾಜಪುರ, ಹೊಂಬುಜ, ಕಂಬದ ಹಳ್ಳಿ,..ಮುಂತಾದ ಮಠಗಳ ಶ್ರೀ ಗಳವರು ಮನೆಗೇ ಬಂದು ಆಶೀರ್ವಾದ ಮಾಡಿದ್ದರು. ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ, ನಿರಂಜನ್ ಜೀ.
ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್ ದಂಪತಿಗಳು, ಅನೇಕ ರಾಜಕೀಯ ಮುಖಂಡರು, ಧಾರ್ಮಿಕ ಬಂಧುಗಳು, ಹಿರಿಯರು, ಸಜ್ಜನರು, ಸಾಹಿತಿಗಳು ಹಿತೈಷಿಗಳು….ಹೀಗೆ ನೂರಾರು ಮಂದಿಯ ಪಾದಸ್ಪರ್ಶದಿಂದ ನಿಮ್ಮ ಮನೆ,ಮನ ಪಾವನವಾಯಿತು.
ರತ್ನಕರಂಡಕ ಶ್ರಾವಕಾಚಾರ ಸ್ವಾಧ್ಯಾಯ ಗಣದಲ್ಲಿ ಸಕ್ರಿಯ ಸದಸ್ಯರಾಗಿದ್ದು, ಅಖಂಡ ಣಮೋಕಾರ ಮಂತ್ರ ಪಠಣೆ, ಅಖಂಡ ಭಕ್ತಾಮರ ಸ್ತೋತ್ರ ಪಠಣೆ.. ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತನ್ನ ದೈಹಿಕ ಸಾಮರ್ಥ್ಯವನ್ನು ಮೀರಿ ತೊಡಗಿಸಿಕೊಂಡಿದ್ದರು. ಅಂತರ್ರಾಷ್ಟ್ರೀಯ ಧಾರ್ಮಿಕ ಪಾಠಕ್ಕೆ ನೀಡಿದ ತಾಂತ್ರಿಕ ಮತ್ತು ಇನ್ನಿತರ ಸಹಕಾರ ಅದ್ಭುತ. ಆನ್ಲೈನ್ ಮೂಲಕ ಧಾರ್ಮಿಕ ಪಾಠದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು, ಮುಂದಿನ ಪೀಳಿಗೆಗೆ ಧಾರ್ಮಿಕ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅವರ ಬಹುದಿನದ ಕನಸು.
ಸುಹಾಸ್ತಿ ಯುವ ಜೈನ್ ಮಿಲನ್ ಹಮ್ಮಿ ಕೊಂಡಿದ್ದ ಜಿನಸಮ್ಮಿಲನ ಆರತಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದವರಲ್ಲಿ ಇವರೂ ಒಬ್ಬರು. ಏಕ ಕಾಲದಲ್ಲಿ 2508 ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಜೈನಧರ್ಮ ಹಾಗೂ ಗಂಧಕುಟಿ ಬಳಗದ ಯಾವುದೇ ಒಂದು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಕುದ್ಯಾಡಿಯವರು.
ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗಿದ್ಸ ನೂರಾರು ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ಬರುವಂತೆ ಮಾಡುತ್ತಿದ್ದಾರೆ. ತನ್ನದೇ ಸ್ವಂತ ನಿರಂಜನ ಲಹರಿ ಆ್ಯಪ್ ಮೂಲಕ ನಿರಂತರವಾಗಿ ಧಾರ್ಮಿಕ ಪ್ರಭಾವನೆಯನ್ನು ಮಾಡುತ್ತಿದ್ದಾರೆ. ರಯಣ ಸಾರ, ಬೋಧ ಪಾವುಡ, ಜೈನ ತತ್ವ ವಿದ್ಯಾ–ಈ ಗ್ರಂಥಗಳಿಂದ ಪ್ರತೀ ದಿನ ಲೇಖನಗಳು ಪ್ರಸಾರವಾಗುತ್ತಿವೆ. ಸ್ವತಃ ಕವಿಯೂ,ಪರಿಸರ ಪ್ರೇಮಿಯೂ ಆದ ಇವರು ನೂರಾರು ಜಿನ ಭಕ್ತಿ ಗೀತೆಗಳನ್ನು ರಚಿಸಿ, ಹಾಡುತ್ತಿರುವುದು ನಮ್ಮನ್ನೆಲ್ಲಾ ಹುಬ್ಬೇರಿಸುವಂತೆ ಮಾಡಿದೆ. ಜಿನ ಭಜನಾ ಕಾರ್ಯಕ್ರಮ ಗಳಿಗೆ, ಜೈನ್ ಮಿಲನ್ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ಇವರಿಂದ. ನಾಡಿನಾದ್ಯಂತ ಯಾವುದೇ ಜಿನಾಲಯಗಳ ಪಂಚಕಲ್ಯಾಣ, ಪುನರ್ ಪ್ರತಿಷ್ಠೆ, ವಿಶೇಷ ಪೂಜಾಕಾರ್ಯಕ್ರಮಗಳಿದ್ದರೂ ನಿರಂಜನ ಲಹರಿಯಲ್ಲಿ ನೇರಸಹ ಪ್ರಸಾರ. ಮನೆಯಲ್ಲಿದ್ದುಕೊಂಡೇ ಧರ್ಮ ಲಾಭ ಪಡೆಯುವ ಸದವಕಾಶ. ಧಾರ್ಮಿಕ ಸ್ಥಳಗಳ, ವ್ಯಕ್ತಿಗಳ ಪರಿಚಯಗಳನ್ನು ವಿಶೇಷ ರೀತಿಯಲ್ಲಿ ತನ್ನ ಲೇಖನಗಳ ಮೂಲಕ ಅಭಿವ್ಯಕ್ತಿಗೊಳಿಸುವ ಪರಿ ಅದ್ಭುತ. ಶ್ರುತ ಸ್ಕಂಧ ಕನ್ನಡ ಕಾವ್ಯ ಗಣದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ. ಚಾರಿತ್ರ ಚಕ್ರವರ್ತಿ ಶಾಂತಿ ಸಾಗರ ಮಹಾರಾಜರ ಜೀವನ ಚರಿತ್ರೆ ಸ್ವಾಧ್ಯಾಯ ಶ್ರೀ ಮಿತ್ರಸೇನ್ ಜೈನ್ ರವರಿಂದ ನಿರಂಜನ ಲಹರಿಯಲ್ಲಿ ಮತ್ತು ಗಂಧಕುಟಿಯಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತನ್ನ ದೈಹಿಕ ಸ್ಥಿತಿಯನ್ನು ಲೆಕ್ಕಿಸದೆ, ನಿರಂತರ ಧರ್ಮ ಪ್ರಭಾವನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಆತ್ಮೀಯ ನಿರಂಜನ್, Really you are great. ಜೈನ ಧರ್ಮಕ್ಕೆ, ಜೈನ ಧರ್ಮೀಯರಿಗೆ ಅಥವಾ ಜೈನ ಸಮಾಜಕ್ಕೆ ಏನಾದರೂ ಅನ್ಯಾಯಗಳಾದಾಗ ಮೊದಲು ಪ್ರತಿಭಟಿಸುವುದು ನಿರಂಜನ್ ರವರ ಲೇಖನಿ. ಅನ್ಯಾಯಗಳನ್ನು ನೇರ ನುಡಿಯಿಂದ ಖಂಡಿಸಿ ಸರಿಪಡಿಸುವ ಎದೆಗಾರಿಕೆ ಇವರದ್ದು.ಇವರ ಹುಟ್ಟು ಹಬ್ಬವನ್ನು ಅಭಿಮಾನಿಗಳೆಲ್ಲಾ ಆನ್ಲೈನ್ ನಲ್ಲಿ ಸಂಭ್ರಮದಿಂದ ಆಚರಿಸಿದ್ದು ಉಲ್ಲೇಖನೀಯ.
ವೈಕಲ್ಯ ಗೆದ್ದ ಅಸಮಾನ್ಯರಲ್ಲಿ ನಿರಂಜನನರು ಒಬ್ಬರು. ಯಾರಿಂದಲೂ ಯಾವ ಸಹಾಯ ಹಸ್ತವನ್ನೂ ಯಾಚಿಸಲಿಲ್ಲ, ವೇದಿಕೆ ಬಯಸಲಿಲ್ಲ, ಚಪ್ಪಾಳೆ ಸದ್ದಿಗೆ ಮನ ಸೋಲಲಿಲ್ಲ, ಸುದ್ದಿಯಾಗಬೇಕೆಂದು ಯಾರನ್ನೂ ಓಲೈಸಲಿಲ್ಲ. ಇವರ ಸೇವೆಯನ್ನು ಗುರುತಿಸಿ ಹಲವಾರು ಸನ್ಮಾನ ,ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಪಂಜಿಕಲ್ಲು,ಅಳದಂಗಡಿ ಪಂಚಕಲ್ಯಾಣಗಳಲ್ಲಿ ಸನ್ಮಾನಗಳು ನಡೆದವು. ಯಾವುದೇ ಗಣ ಇರಲಿ , ಯಾವುದೇ ಅ್ಯಪ್ ಇರಲಿ,ಅತಿಥಿ ಗಳ ನಿಯೋಜನೆ ಇರಲಿ,M.C.ಇರಲಿ,ಸ್ವಾಗತ ಇರಲಿ,ಕಾರ್ಯಕ್ರಮ ಸಂಯೋಜನೆ ಇರಲಿ,….ಎಲ್ಲದಕ್ಕೂ ಸೈ ಎನಿಸಿಕೊಂಡವರು.
ಪ್ರಶಸ್ತಿಗಳು ;-
1.ಸದ್ಧರ್ಮ ಬಂಧು
2.ಜಿನ ದರ್ಶನ ಪುರಸ್ಕಾರ
3.ಜಿನ ಧರ್ಮ ಪ್ರಭಾವಕ ಪುರಸ್ಕಾರ
4.ಅಹಿಂಸಾ ಗೌರವ ಪುರಸ್ಕಾರ
5.ಸದ್ಧರ್ಮ ಪ್ರೇಮ
6.ಜಿನವಾಣಿ ಪುರಸ್ಕಾರ
7.ಪ್ರಭಾವನಾ ಶ್ರೀ
ಈ ಪ್ರಶಸ್ತಿ ಗಳು ಇವರ ಧರ್ಮ ಪ್ರಭಾವನೆಗೆ, ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿವೆ. ಶ್ರೀ ಯುತ ನವೀನ್ ಜಾಂಬ್ಳೆಯವರ ನೇತ್ರತ್ವದಲ್ಲಿ ಪರಮ ಪಾವನವಾದ ಇಪ್ಪತ್ತು ತೀರ್ಥಂಕರರು ಶಾಶ್ವತ ಸುಖವನ್ನು ಪಡೆದಂತಹ ಸಮ್ಮೇದಗಿರಿ ಸಿದ್ಧಕ್ಷೇತ್ರದ ದರ್ಶನ ಗೈದು ಜೀವನ ಪಾವನ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬ ಸಾಧಕನ ಹಿಂದೆ ನೋವಿದೆ. ಪ್ರತಿಯೊಂದು ನೋವಿನ ಮುಂದೆ ಗೆಲುವಿದೆ. ಸರ್ವಾಂಗ ಸುಂದರ ಅವಯವಗಳಿದ್ದರೂ ಕ್ಷುಲ್ಲಕ ಕಾರಣಗಳಿಂದಾಗಿ ಹೊಂದಾಣಿಕೆ ಒಲ್ಲದ ಜೀವಗಳು ಆತ್ಮಹತ್ಯೆ ಗೆ ಶರಣಾಗುತ್ತಿರುವುದು ಖೇದಕರ. ಇವರೆಲ್ಲರಿಗೂ ನಿರಂಜನ್ ರವರು ಒಂದು ಆದರ್ಶ ಉದಾಹರಣೆ. ಭಗವಂತ ದಯಪಾಲಿಸಿದ್ದನ್ನು ಉತ್ಕೃಷ್ಟ ರೂಪದಲ್ಲಿ ವಿನಿಯೋಗಿಸುತಿದ್ದಾರೆ. ಇವರ ಈ ಸಾಧನೆಯ ಹಿಂದೆ ಕುಟುಂಬ ವರ್ಗದವರು ನೀಡುತ್ತಿರುವ ದೈಹಿಕ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಕೂಡಾ ಅಭಿನಂದನಾರ್ಹ ನಿರಂಜನ್ ಜೀ ಯವರೇ, ನಿಮಗೆ ಭಗವಂತ ಉತ್ತಮ ಆರೋಗ್ಯವನ್ನು ದಯಪಾಲಿಸಿ,ಸಮಾಜಕ್ಕೆ ನಿಮ್ಮಿಂದ ಇನ್ನೂ ಹೆಚ್ಚಿನ ಸೇವೆ ಲಭಿಸುವಂತಾಗಲಿ ಎಂದು ಜಿನೇಂದ್ರ ಭಗವಂತರಲ್ಲಿ ಪ್ರಾರ್ಥಿಸುತ್ತೇವೆ.
-ಮಾಲತಿ ವಸಂತರಾಜ್, ಕಾರ್ಕಳ
https://youtu.be/NZEFlMlC7BI