ಸಮುದಾಯದ ಸಕ್ರಿಯವಾಗಿರಬೇಕಾದರೆ ಚಟುವಟಿಕೆಗಳು ಹೆಚ್ಚಿರಬೇಕು, ಜೈನ ಸಮುದಾಯಕ್ಕೆ ಸೀಮಿತವಾಗಿ ಕ್ರೀಡಾ ಚಟುವಟಿಕೆಗಳನ್ನು, ಸಾಂಸ್ಕೃತಿ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಪರಸ್ಪರ ಬೆಸಲು ಕಾರಣವಾಗಿದೆ ಎಂದು ಶಾಸಕ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ಎಸ್ಎಸ್ಐಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜೈನ್ ಚಾಂಪಿಯನ್ಸ್ ಲೀಗ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯ ಮೊದಲಿನಿಂದಲೂ ಸಂಘಟಿತವಾಗಿದ್ದು, ಇತರೆ ಸಮುದಾಯಗಳಿಗೆ ಸ್ಪೂರ್ತಿಯಾಗಿದೆ, ಕೊರೋನಾ ಸಂಕಷ್ಟದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಸಮುದಾಯ ಉದಾರತೆ ಮೆರೆದಿದ್ದು, ಮುಂದೆಯೂ ಸಮಾಜದ ಸೇವೆಗೆ ಕೈ ಜೋಡಿಸುವಂತೆ ತಿಳಿಸಿದರು.
ನಂತರ ಮಾತನಾಡಿದ ಸಮುದಾಯದ ಮುಖಂಡರಾದ ಉತ್ತಮ್ ಮತ್ತು ಸಂಘ್ ವಿ ಸುರೇಂದ್ರ ಶಾ ಅವರು, ಕ್ರೀಡಾಕೂಟಗಳು ಮನಸ್ಸಿಗೆ ಉಲ್ಲಾಸ ನೀಡುವುದರ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡುವುದರಿಂದ ಸಮುದಾಯದ ಯುವಕರು ಪ್ರತಿ ವರ್ಷವು ಸಹ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತುಮಕೂರು ಜೈನ್ ಚಾಂಪಿಯನ್ಸ್ ಲೀಗ್ಸ್ನಲ್ಲಿ ತುಮಕೂರು ನಗರದ ಆರು ತಂಡಗಳು ಸ್ಪರ್ಧಿಸಿದ್ದು, ಚಾಂಪಿಯನ್ಸ್ ಆಗಿ ಕ್ಯಾಂಪಸ್ ಸೂಪರ್ ಕಿಂಗ್ಸ್, ರನ್ನರ್ ಆಪ್ ಆಗಿ ರಾಯಲ್ ಕಿಂಗ್ಸ್ ತಂಡಗಳು ಹೊರಹೊಮ್ಮಿದವು, ಚಾಂಪಿಯನ್ಸ್ಗೆ ಬಹುಮಾನವಾಗಿ 22,222 ನಗದು ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ 11,111 ನಗದು ಮತ್ತು ಟ್ರೋಫಿ ಹಾಗೂ ತಂಡದ ಸದಸ್ಯರಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು.
ಚಾಂಪಿಯನ್ಸ್ ಲೀಗ್ಗೆ ಕ್ಯಾಂಪಸ್ ಫ್ಯಾಷನ್ ಹಬ್, ಮಹಾವೀರ್ ಕೊಕೊನೆಟ್ ಇಂಡಸ್ಟ್ರೀಸ್, ಷಾ ನೈನ್ಮಲ್ ಧರ್ಮಚಂದ್, ನಾಕೋಡ ಜ್ಯೂವೆಲರ್ಸ್, ವಿ.ಎಸ್.ಜ್ಯೂವೆಲರ್ಸ್, ಪ್ರಿನ್ಸ್ ಗ್ರೂಪ್, ಪೂಜಾ ಜ್ಯೂವೆಲರ್ಸ್, ಮೆಡಿಕಲ್ ಎಂಪೋರಿಯಂ ಮತ್ತು ತುಳಸಿ ಜ್ಯೂವೆಲರ್ಸ್ ಪ್ರಾಯೋಜಕತ್ವವಹಿಸಿದ್ದವು. ತುಮಕೂರು ಜೈನ್ ಚಾಂಪಿಯನ್ಸ್ ಲೀಗ್ಸ್ ಸಂಸ್ಥಾಪಕರಾದ ದೀಪಕ್ ಜೈನ್, ಸಹ ಸಂಸ್ಥಾಪಕ ಡಾ.ಪ್ರತೀಕ್ ಜೈನ್, ಆಯೋಜಕರಾದ ಅರವಿಂದ ರಾವ್, ಅಕ್ಷತ್ ಜೈನ್, ದರ್ಶಿತ್ ಜೈನ್ ಇತರರಿದ್ದರು.