ಐಪಿಎಲ್ ಕ್ರಿಕೆಟ್ ಬಿಟ್ಟು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿ ಆಗಿ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಐಪಿಎಲ್ನಲ್ಲಿ ಭಾಗಿ ಆಗಿರುವ ಶ್ರೀಲಂಕಾ ಕ್ರಿಕೆಟಿಗರಿಗೆ ಹೇಳಿದ್ದಾರೆ.
ʻಒಂದು ವಾರ ಐಪಿಎಲ್ ಬಿಟ್ಟು ಪ್ರತಿಭಟನೆಯಲ್ಲಿ ಭಾಗಿ ಆಗಿʼ ಎಂದು ರಣತುಂಗಾ ಆಗ್ರಹಿಸಿದ್ದಾರೆ.
ʻಐಪಿಎಲ್ನಲ್ಲಿ ಅದ್ಧೂರಿ ಆಗಿ ಆಡುತ್ತಿರುವ ಕೆಲವು ಕ್ರಿಕೆಟಿಗರು ಅವರ ದೇಶದ ಬಗ್ಗೆ ಮಾತಾಡಿಲ್ಲ. ದುರಾದೃಷ್ಟವೆಂದರೆ ಜನರು ತಮ್ಮ ಸರ್ಕಾರದ ವಿರುದ್ಧ ಮಾತಾಡಲು ಹೆದರುತ್ತಾರೆ. ಸಚಿವಾಲಯದ ಅಡಿಯಲ್ಲಿ ಬರುವ ಕ್ರಿಕೆಟ್ ಮಂಡಳಿ ಜೊತೆಗೆ ಈ ಕ್ರಿಕೆಟಿಗರು ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ತಮ್ಮ ಕೆಲಸ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವು ಯುವ ಆಟಗಾರರು ಮುಂದೆ ಬಂದಿರುವಂತೆ ಇವರೂ ಈಗ ಹೆಜ್ಜೆ ಇಡಬೇಕು ಮತ್ತು ಪ್ರತಿಭಟನೆಗಳನ್ನು ಬೆಂಬಲಿಸಿ ಹೇಳಿಕೆ ನೀಡಬೇಕುʼ ಎಂದು ಅರ್ಜುನ್ ರಣತುಂಗಾ ಹೇಳಿದ್ದಾರೆ.
ʻಏನಾದರೂ ತಪ್ಪು ನಡೆದಾಗ ನಮ್ಮ ವ್ಯವಹಾರದ ಬಗ್ಗೆಯೂ ಯೋಚಿಸದೇ ನಮಗೆ ಅದರ ವಿರುದ್ಧ ಮಾತಾಡುವ ಧೈರ್ಯ ಬೇಕು. ನಾನು ಯಾಕೆ ಪ್ರತಿಭಟನೆಯಲ್ಲಿ ಇಲ್ಲ ಎಂದು ಜನ ಕೇಳುತ್ತಾರೆ. ನಾನು 19 ವರ್ಷ ರಾಜಕೀಯದಲ್ಲಿ ಇದ್ದವನು ಮತ್ತು ಇದು ರಾಜಕೀಯ ವಿಷಯ ಅಲ್ಲ. ಇದುವರೆಗೆ ಯಾವ ರಾಜಕೀಯ ಪಕ್ಷವಾಗಲೀ ರಾಜಕಾರಣಿಯಾಗಲಿ ಪ್ರತಿಭಟನೆಯಲ್ಲಿ ಭಾಗಿ ಆಗಿಲ್ಲ ಮತ್ತು ಇದು ಶ್ರೀಲಂಕಾದ ಜನರ ದೊಡ್ಡ ಶಕ್ತಿʼ ಎಂದು ರಣತುಂಗಾ ಹೇಳಿದ್ದಾರೆ.