ಈಶ್ವರಪ್ಪ ಭರವಸೆಯ ಆಧಾರದಲ್ಲಿ ಸಂತೋಷ್ಗೆ ಕಾಮಗಾರಿ ನಡೆಸಲು ಪತ್ರ ಕೊಟ್ಟಿದ್ದೆ. ಸಚಿವ ಈಶ್ವರಪ್ಪನವರಿಗೆ ಗುತ್ತಿಗೆದಾರ ಸಂತೋಷ್ ಅವರ ಪರಿಚಯವಿದೆ ಎಂದು ಹೇಳುವ ಮೂಲಕ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಕ್ ನೀಡಿದ್ದಾರೆ.
ಹಿಂಡಲಗಾ ಗ್ರಾಮದ ರಸ್ತೆ ಕಾಮಗಾರಿ ನಡೆಸುವಂತೆ ಸಚಿವ ಈಶ್ವರಪ್ಪ ಅವರು ಸಂತೋಷ್ಗೆ ನೀಡಿದ್ದ ಭರವಸೆಯ ಆಧಾರದಲ್ಲಿ ನಾನು ಪತ್ರ ಕೊಟ್ಟಿದ್ದೆ ಎಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮುನ್ನೋಳಕರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸಚಿವ ಈಶ್ವರಪ್ಪ ಅವರು ಸಂತೋಷ್ ನನಗೆ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಅವರು, ಸಂತೋಷ್ಗೆ ಈಶ್ವರಪ್ಪ ಕಾಮಗಾರಿ ನಡೆಸಲು ಸೂಚಿಸಿದ್ದು ನಿಜ ಎಂಬ ಹೇಳಿಕೆಯಿಂದ ಬಿಜೆಪಿ ಮುಖಂಡರು ತಬ್ಬಿಬ್ಬಾಗಿದ್ದಾರೆ.
ಹಿಂಡಲಗಾ ಗ್ರಾಮದ ಲಕ್ಷ್ಮೀದೇವಿ ಜಾತ್ರೆ 100 ವರ್ಷಗಳ ಬಳಿಕ ನಡೆಯುತ್ತಿತ್ತು. ರಸ್ತೆ ದುರಸ್ತಿ ಸೇರಿದಂತೆ 108 ಕಾಮಗಾರಿಗಳನ್ನು ನಡೆಸಲಾಗಿತ್ತು. ಅದರಲ್ಲಿ ಸಂತೋಷ್ನ ಬಿಲ್ ಮಾತ್ರ ಬಾಕಿ ಉಳಿದಿದೆ ಎಂದು ನಾಗೇಶ್ ತಿಳಿಸಿದ್ದಾರೆ.
ಸ್ವತಃ ನಾನೂ ಸಹ ಎರಡು ಸಲ ಸಂತೋಷ್ ಜೊತೆಗೆ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಕಾಮಗಾರಿ ಮಾಡು, ನಂತರ ಸರಿ ಮಾಡುತ್ತೇನೆ ಎಂದು ಈಶ್ವರಪ್ಪ ಭರವಸೆ ನೀಡಿದ್ದರು ಎಂಬುದಾಗಿ ನಾಗೇಶ್ ತಿಳಿಸಿದ್ದಾರೆ.
ಸಂತೋಷ್ ಬಳಿ ವರ್ಕ್ ಆರ್ಡರ್ ಇತ್ತೋ ಇಲ್ಲವೋ ನನಗೆ ಮಾಹಿತಿ ಇಲ್ಲ, ಸಂತೋಷ್ ಅವರು ಕಾಮಗಾರಿ ನಡೆಸಿದ್ದು ನಿಜ. ಕಾಮಗಾರಿಗೆ ವೆಚ್ಚ ಮಾಡಿರುವ ಹಣ ಸಂತೋಷ್ ಕುಟುಂಬಕ್ಕೆ ಸಿಗಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
https://youtu.be/hm_RqQg_qUg