ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಇಂದು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ದೇಶಾದ್ಯಂತ ದೊಡ್ಡ ಫ್ಯಾಮ್ ಬೇಸ್ ಹೊಂದಿರುವ ನಟ ವಿಜಯ್ ಅವರ ಸಿನೆಮಾ ಚೆನ್ನಾಗಿಲ್ಲದಿರುವುದನ್ನು ಸಹಿಸಿಕೊಳ್ಳಲಾಗದೆ ಅಭಿಮಾನಿಗಳು ‘ಬೀಸ್ಟ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಪರದೆಗೆ ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ.
ಮಧುರೈನ ಮೇಲೂರು ಗಣೇಶ್ ಚಿತ್ರಮಂದಿರದಲ್ಲಿ ಬೀಸ್ಟ್ ಸಿನೆಮಾ ಪ್ರದರ್ಶನಗೊಳ್ಳುತ್ತಿತ್ತು, ಆ ಸಮಯದಲ್ಲಿ ಸಿನಿಮಾ ಚೆನ್ನಾಗಿಲ್ಲವೆಂದು, ಬಹಳ ಬೋರ್ ಹೊಡೆಸುತ್ತಿದೆ ಎಂದು ವಿಜಯ್ ಅಭಿಮಾನಿಗಳೇ ಸಿನಿಮಾದ ಪರದೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಇದೇ ಮಾದರಿಯ ಶೀರ್ಷಿಕೆಯೊಂದಿಗೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿರುವ ವೀಡಿಯೋ ಹರಿದಾಡುತ್ತಿದೆ.
ಮತ್ತೊಂದು ವರದಿಯ ಪ್ರಕಾರ, ಅಭಿಮಾನಿಗಳು ಪರದೆಗೆ ಬೆಂಕಿ ಇಟ್ಟಿಲ್ಲ ಬದಲಿಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಪರದೆಗೆ ತಾನೇ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ವಿಜಯ್ರ ಬೀಸ್ಟ್ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇತ್ತು, ಆದರೆ ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಬಂದಿರುವುದು ವಿಜಯ್ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿದೆ.
ಬೀಸ್ಟ್ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸಿನಿಮಾವು ಆಕ್ಷನ್ ಕಾಮಿಡಿ ಕತೆಯನ್ನು ಹೊಂದಿದೆ. ಸ್ಟಾರ್ ನೆಟ್ವರ್ಕ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.