ಬರಹ: ಅಕ್ಷಯ್ ಕುಮಾರ್
`ಏನಕ್ಕೆ ಈಶ್ವರಪ್ಪ ಅವರನ್ನು ಬಂಧನ ಮಾಡ್ಬೇಕು..?’ – ಶೇಕಡಾ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಆ ಮೂಲಕ ಬಿಜೆಪಿ ಕಾರ್ಯಕರ್ತರೂ ಆಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಆಗಿ ರಾಜೀನಾಮೆ ಕೊಟ್ಟಿರುವ ಸಚಿವ ಕೆ ಎಸ್ ಈಶ್ವರಪ್ಪ ಅವರ ಸಮರ್ಥನೆಗೆ ಜೆಡಿಎಸ್ ನಾಯಕರೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ ನಿಂತಿರುವ ಪರಿ.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತಾಡದ ಕುಮಾರಸ್ವಾಮಿ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಪಾಲಿಗೆ ಆಪ್ತಮಿತ್ರ, ಕಷ್ಟಕಾಲದ ಬಂಧು, ಬಿಜೆಪಿ ದುರಿತಗಳನ್ನು ಶಮನ ಮಾಡುವ ದೋಸ್ತಿ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಹುಬ್ಲೋಟ್ ವಾಚ್, ಕೆಂಪೇಗೌಡ ಬಡಾವಣೆ ಅಕ್ರಮ, ಬೆಂಗಳೂರಲ್ಲಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಬಗ್ಗೆ ಹೋದಲ್ಲಿ ಬಂದಲ್ಲಿ ಆರೋಪಗಳನ್ನು ಮಾಡುತ್ತಾ ಆಗ ಅಧಿಕೃತ ವಿರೋಧ ಪಕ್ಷವಾಗಿದ್ದ ಬಿಜೆಪಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದರು ಕುಮಾರಸ್ವಾಮಿ. ಐಎಎಸ್ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆ ಮತ್ತು ಇನ್ಸ್ಪೆಕ್ಟರ್ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕೆ ಕುಮಾರಸ್ವಾಮಿ ಬಳಸಿಕೊಂಡಷ್ಟು ಬಿಜೆಪಿಯೂ ಬಳಸಿಕೊಂಡಿರಲಿಲ್ಲ. ಆ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆದ ಬಳಿಕ ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ತಮ್ಮ ದೋಸ್ತಿ ಪಕ್ಷದವರಿಗೆ `ಸಿಬಿಐ ಕ್ಲೀನ್ಚಿಟ್’ ಕೊಟ್ಟಿದ್ದನ್ನು ನೆನೆಪಿಸಿಕೊಂಡು ತಾವೂ ಕ್ಲೀನ್ಚಿಟ್ ಕೊಟ್ಟರು, ಅದು ಅಚಾನಕ್ಕಾಗಿ ಸಿಕ್ಕ ಮುಖ್ಯಮಂತ್ರಿ ಗಾದಿಯ ಮಹಿಮೆ.
ಆದರೆ ಈಗ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರ ವಿರುದ್ಧವೇ ಲಂಚ ಸ್ವೀಕಾರ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಸರಣಿ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಮಾಡುತ್ತಿರುವುದು ಹಾದಿ-ಬೀದಿಯಲ್ಲಿ ಹೋಗುತ್ತಿರುವವರಲ್ಲ, ರಾಜ್ಯದಲ್ಲಿ ಗುತ್ತಿಗೆದಾರರನ್ನು ಪ್ರತಿನಿಧಿಸುವ ಗುತ್ತಿಗೆದಾರರ ಸಂಘವೇ ಕಳೆದ ವರ್ಷದ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಖುದ್ದು ಪತ್ರವನ್ನೇ ಬರೆದಿತ್ತು. ಆ ಬಳಿಕ ಮೂರು ಬಾರಿ ಸುದ್ದಿಗೋಷ್ಠಿಯನ್ನೂ ನಡೆಸಿತ್ತು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಕೂಡಾ `ಅನುದಾನ ಬಿಡುಗಡೆ ಆಗದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ’ ಎಂದು ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಖುದ್ದು ದೂರು ನೀಡಿದ್ದಲ್ಲದೇ ಮಾರ್ಚ್ ಕೊನೆ ವಾರದಲ್ಲಿ ವೀಡಿಯೋ ಹೇಳಿಕೆಗಳನ್ನೂ ಬಿಡುಗಡೆ ಮಾಡಿದ್ದರು.
ಬಿಜೆಪಿ ಭ್ರಷ್ಟಾಚಾರ ಮತ್ತು ಕುಮಾರಸ್ವಾಮಿಗೆ ಇರುವ ಆತಂಕ:
ಧರ್ಮ ರಾಜಕಾರಣದ ಹೆಸರಲ್ಲಿ ಹಿಂದೂ ಮತಗಳ ಧ್ರುವೀಕರಣಕ್ಕಾಗಿ ಸರಣಿ ತಂತ್ರಗಳನ್ನು ಪೋಣಿಸಿಕೊಂಡು ಅನುಷ್ಠಾನಗೊಳಿಸುತ್ತಿದ್ದ ಬಿಜೆಪಿಗೆ ಮುಖಭಂಗ ಆಗಿದ್ದು ಈಶ್ವರಪ್ಪ ಅವರ ವಿರುದ್ಧ ಲಂಚ ಬೇಡಿಕೆ ಆರೋಪ ಮಾಡಿದ್ದ ಲಿಂಗಾಯತ ಸಮುದಾಯದ ಸಂತೋಷ್ ಪಾಟೀಲ್ ಆತ್ಮಹತ್ಯೆ. ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರವೇ ಸಿಕ್ಕಿಬಿಡ್ತು.
ಮೇಲ್ನೋಟಕ್ಕೆ ಈ ಆರೋಪಗಳು ಗಂಭೀರವಾಗಿದ್ದರೂ, `ಈ ಆರೋಪಗಳ ಬಗ್ಗೆ ದಾಖಲೆಗಳಿವೆ, ನಾವು ಮಾನನಷ್ಟ ಮೊಕದ್ದಮೆ ಎದುರಿಸಲು ಸಿದ್ಧ’ ಎಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದ್ದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ರಕ್ಷಣೆಗೆ ನಿಂತಿರುವುದು ಯಾಕೆ..? ಇದಕ್ಕೆ ಕಾರಣ ಸರಳ. ಬಹುಶಃ ಕಾಂಗ್ರೆಸ್ ಪಾಲಿಗೆ ಬಿಜೆಪಿ ಭ್ರಷ್ಟಾಚಾರದ ಬ್ರಹ್ಮಾಸ್ತç ಸಿಕ್ಕಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ಆತಂಕ ತಂದಿದೆ, ಬಿಜೆಪಿಗಿಂತಲೂ ಹೆಚ್ಚು ಎನ್ನುವುದು ಜೆಡಿಎಸ್ ಪಕ್ಷದ ಮತ್ತೊಂದು ವೈಚಿತ್ರ.
ಕಾರಣ ಸರಳ – ಬಿಜೆಪಿ ಧರ್ಮರಾಜಕಾರಣದಿಂದ ಜೆಡಿಎಸ್ಗೆ ಆಗಬಹುದಾದ ಲಾಭದ ಲೆಕ್ಕಾಚಾರ, (ಕಳೆದ ಬಾರಿಯ ಅಂಕಣದಲ್ಲಿ ನಾವು ಈ ಬಗ್ಗೆ ಬರೆದಿದ್ವಿ) ಬಿಜೆಪಿ ಧರ್ಮರಾಜಕಾರಣದ ಬಗ್ಗೆ ಕೇಸರಿ ಪಾಳಯದ ವಿರುದ್ಧ ತಡವಾಗಿ, ವಿಳಂಬವಾಗಿ ಬಂದ ಕುಮಾರಸ್ವಾಮಿ ಅವರ ಆಕ್ರೋಶದ ನುಡಿಗಳು (ಮೇಲ್ನೋಟಕ್ಕೆ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಉರುಳಿಸಿರುವ ದಾಳದಂತಿದೆಯೇ ಹೊರತು ಅದು ಬೇರೇನೂ ಅಲ್ಲ. ನೀನು ಚಿವುಟಿದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎಂಬ ಒಪ್ಪಂದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಂದಂತೆ ಇದೆ).
ಈ ಹಿನ್ನೆಲೆಯಲ್ಲಿ ಬಿಜೆಪಿ ಭ್ರಷ್ಟಾಚಾರವೇ ಮುಂದಿನ ವರ್ಷದಲ್ಲಿ ಚುನಾವಣಾ ವಿಷಯವಾದರೇ ಅದು ಬಿಜೆಪಿಗೆ ಮಾತ್ರವಲ್ಲ ಜೆಡಿಎಸ್ಗೂ ದೊಡ್ಡ ಹಿನ್ನಡೆ ಆಗಬಹುದು ಎನ್ನುವುದು ಕುಮಾರಸ್ವಾಮಿ ಆತಂಕ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸಾಂಪ್ರಾದಾಯಿಕ ದಲಿತ ಮತ್ತು ಮುಸ್ಲಿಂ ಸಮುದಾಯದ ಮತಗಳನ್ನೇ ಒಡೆಯಬೇಕು ಎನ್ನುವುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಕುಮಾರಸ್ವಾಮಿ ಅವರಿಗೆ ಬಿಜೆಪಿ ವಿರುದ್ಧ ಇರಬಹುದಾದ ಆಡಳಿತ ವಿರೋಧಿ ಮತಗಳಿಗಿಂತಲೂ ಕಾಂಗ್ರೆಸ್ ಮತಗಳನ್ನು ಒಡೆದು ಹಾಕುವುದು ಹೇಗೆ ಎನ್ನುವುದರ ಮೇಲೆ ಸಂಪೂರ್ಣ ಗಮನ, ತಂತ್ರಗಾರಿಕೆ ನೆಟ್ಟಿದಂತಿದೆ. ಹೀಗಾಗಿ ಕುಮಾರಸ್ವಾಮಿ ಅವರಿಗೂ ಬಿಜೆಪಿ ಭ್ರಷ್ಟಾಚಾರ ಹೀಗೆ ಮೂಲ ಅಥವಾ ಗಂಭೀರ ವಿಷಯಗಳಿಗಿಂತ ಧರ್ಮ ರಾಜಕಾರಣದ ಗಲಾಟೆಯೇ ಜೀವಂತ ಆಗಿರಲಿ ಎಂಬ ಇಚ್ಛೆ ಇದಂತಿದೆ (ಬಿಜೆಪಿಯ ಇಚ್ಛೆಯೂ ಇದೇ). ಕಾರಣ ಆಗ ಬಿಜೆಪಿ ವಿರುದ್ಧ ಟ್ವೀಟ್ಗಳನ್ನು ಮಾಡಬಹುದು, ಕೂಗಾಡಹುದು.
ಬಿಜೆಪಿ ಸಚಿವರು ಮತ್ತು ಶಾಸಕರ ವಿರುದ್ಧ ಕೇಳಿಬಂದಿರುವ ಲಂಚ ಬೇಡಿಕೆ ಆರೋಪದ ಬಗ್ಗೆ ಕುಮಾರಸ್ವಾಮಿ ಇದುವರೆಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆಯೂ ಟ್ವೀಟಿಸಿಲ್ಲ. ಬದಲಿಗೆ ಬಹಿರಂಗವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಷಡ್ಯಂತ್ರ ಎಂದು ಪದೇ ಪದೇ ಹೇಳುವ ಮೂಲಕ ಆಡಳಿತ ಬಿಜೆಪಿಯ ಬೆನ್ನಿಗೆ ನಿಂತಿದ್ದಾರೆ, ವಿಚಿತ್ರ ಅಂದ್ರೆ ಬಿಜೆಪಿ ನಾಯಕರೇ ಇಷ್ಟೊಂದು ಸಮರ್ಥನೆಗೆ ಇಳಿದಿಲ್ಲ..!
ಉತ್ತರಪ್ರದೇಶದಲ್ಲಿ ಬಿಎಸ್ಪಿ, ಕರ್ನಾಟಕದಲ್ಲಿ ಜೆಡಿಎಸ್..!
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ರಾಜಕೀಯ ನಡವಳಿಕೆಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ರಾಜಕೀಯ ನಡವಳಿಕೆಗೂ ಸಾಮ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದ ನಿರ್ಧಾರಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡವರು ಮಾಯಾವತಿ. ಕರ್ನಾಟಕದಲ್ಲಿ ಕುಮಾರಸ್ವಾಮಿ ಬಿಜೆಪಿ ಸರ್ಕಾರದ ಹಲವು ವಿವಾದಾತ್ಮಕ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಈಗ ಭ್ರಷ್ಟಾಚಾರದ ಆರೋಪದಲ್ಲೂ ಬಿಜೆಪಿ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಾರೆ ಕುಮಾರಸ್ವಾಮಿ. ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸುವುದಕ್ಕಿಂತಲೂ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯುವುದು ಮಾಯಾವತಿ ಉದ್ದೇಶವಾಗಿತ್ತು, ಅದಕ್ಕಾಗಿ ಮಾಯಾವತಿ ತಮ್ಮ ಪಕ್ಷವನ್ನು ಬಲಿಕೊಡಲು ಸಿದ್ಧರಾಗಿದ್ದರು, ಕೊಟ್ಟರು ಕೂಡಾ. ಕರ್ನಾಟಕದಲ್ಲೂ ಕುಮಾರಸ್ವಾಮಿ ಅವರ ಏಕಮಾತ್ರ ಉದ್ದೇಶ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು, ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬಂದರೂ ರ್ವಾಗಿಲ್ಲ ಎಂಬ ಮನಸ್ಥಿತಿಯಲ್ಲಿದ್ದಾರೆ ಕುಮಾರಸ್ವಾಮಿ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬಿಜೆಪಿಯನ್ನು ರಕ್ಷಣೆ ಮಾಡುತ್ತಾ ಆ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಟ ತೀವ್ರಗೊಳಿಸುವುದು ಕುಮಾರಸ್ವಾಮಿ ಅವರ ರಣತಂತ್ರ.
ಕುಮಾರಸ್ವಾಮಿ ಅವರ ರಾಜಕೀಯ ಅನಿವಾರ್ಯತೆಗಳು:
ಮೂಲಗಳ ಪ್ರಕಾರ ಈ ಬಾರಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬಿಟ್ಟು ರಾಮನಗರದಲ್ಲಿ ವಿಧಾನಸಭಾ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ. ಚನ್ನಪಟ್ಟಣದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗ್ತಿದೆ. ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಗೆ ಗೆಲುವು ಅಷ್ಟು ಸುಲಭ ಅಲ್ಲ ಎನ್ನುವುದು ಸದ್ಯಕ್ಕೆ ಕ್ಷೇತ್ರದ ಬಗ್ಗೆ ಇರುವ ಪ್ರಾಥಮಿಕ ಮಾಹಿತಿ. ಚನ್ನಪಟ್ಟಣದಲ್ಲಿ ಈ ಬಾರಿ ರಾಜಕೀಯ ಜೀವನದ ನಿರ್ಣಾಯಕ ಚುನಾವಣೆಗೆ ಸಿದ್ಧರಾಗುತ್ತಿರುವ ಮಾಜಿ ಸಚಿವ ಸಿ ಪಿ ಯೋಗೇಶ್ವರ್ `ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಡ್ತಿರುವುದೇ ನಮ್ಮ ಬಿಜೆಪಿ ನಾಯಕರು’ ಎಂದು ನೀಡಿರುವ ಬಹಿರಂಗ ಹೇಳಿಕೆಯ ಹಿಂದೆ `ಕುಮಾರಸ್ವಾಮಿ ಅವರಿಗೆ ಬಿಜೆಪಿ ಎಷ್ಟು ಅನಿವಾರ್ಯ ಆಗಿದೆ’ ಎನ್ನುವುದನ್ನು ಧ್ವನಿಸುತ್ತಿದೆ. ಹಳೇ ಮೈಸೂರು ಭಾಗದಲ್ಲೂ ಈ ಹೊಂದಾಣಿಕೆ ಜೆಡಿಎಸ್ ಗೆ ಬೇಕಾಗಿರಬಹುದು ಮತ್ತು ಬಿಜೆಪಿ ಭ್ರಷ್ಟಾಚಾರವೇ ಚುನಾವಣಾ ವಿಷಯವಾದರೆ ಅದು ಬಿಜೆಪಿಗೂ ನಷ್ಟ, ಬಿಜೆಪಿಗೆ ನಷ್ಟವಾದರೇ ನನಗೂ ನಷ್ಟ ಎನ್ನುವುದು ಕುಮಾರಸ್ವಾಮಿ ಲೆಕ್ಕಾಚಾರದಂತಿದೆ.
ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಸಂದೇಶ ಏನು..?
ಬಿಜೆಪಿ ಭ್ರಷ್ಟಾçಚಾರದ ಬಗ್ಗೆ ಸೊಲ್ಲೆತ್ತದ ಮತ್ತು ಬಿಜೆಪಿ ಭ್ರಷ್ಟಾಚಾರವನ್ನೇ ಬಹಿರಂಗವಾಗಿ ಸಮರ್ಥಿಸಿಕೊಂಡು ಸಂಚರಿಸುತ್ತಿರುವ ಕುಮಾರಸ್ವಾಮಿ ತಮ್ಮ ಪಕ್ಷದ ಜೆಡಿಎಸ್ ಕಾರ್ಯಕರ್ತರಿಗೆ ಕೊಡುವ ಸಂದೇಶ ಏನು..? ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಎಲ್ಲಿಯೂ ಮಾತಾಡ್ಬೇಡಿ, ಏನಿದ್ದರೂ ಕಾಂಗ್ರೆಸ್ ವಿರುದ್ಧವಷ್ಟೇ ಮಾತಾಡಿ ಎಂಬ ಸಂದೇಶ ಕೊಡ್ತಿದ್ದಾರಾ ಕುಮಾರಸ್ವಾಮಿ..? ಹಾಗಾದರೆ ಬಿಜೆಪಿ ಭ್ರಷ್ಟಾಚಾರ ಕುಮಾರಸ್ವಾಮಿ ಅವರಿಗೆ ವಿಷಯವೇ ಆಗದೇ ಇರುವುದು ಪ್ರಾದೇಶಿಕ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಓಡಾಡ್ತಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದ ದಯನೀಯ ಸ್ಥಿತಿ. ಜೆಡಿಎಸ್ ನಾಯಕ ದತ್ತಾ ಅವರ ಮಾತಲ್ಲಿ ಅರ್ಥ ಇದೆ, ದೇವೇಗೌಡರ ಜೆಡಿಎಸ್ಸೇ ಬೇರೆ, ಕುಮಾರಸ್ವಾಮಿ ಜೆಡಿಎಸ್ಸೇ ಬೇರೆ.